ಕಾಂಗ್ರೆಸಿಗರಿಂದ ಪ್ರತಿದಾಳಿ ಆತಂಕ: ಶಾಸಕರ ಭವನದಲ್ಲಿ ಮೊಟ್ಟೆ ನಿರ್ಬಂಧ

ಬೆಂಗಳೂರು, ಆ.20: ಮಡಿಕೇರಿ ಜಿಲ್ಲಾ ಪ್ರವಾಸದ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣದ ಬೆನ್ನಲ್ಲೇ ಶಾಸಕರ ಭವನಕ್ಕೆ ಮೊಟ್ಟೆ ತೆಗೆದುಕೊಂಡು ಹೋಗುವುದನ್ನು ನಿರ್ಬಂಧಿಸಲಾಗಿದೆ.
ಶಾಸಕರ ಭವನಕ್ಕೆ ದಾಳಿ ನಡೆಸಬಹುದೆಂಬ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಶಾಸಕರ ಭವನದಲ್ಲಿ ಕೊಡಗು ಜಿಲ್ಲೆಯ ಬಿಜೆಪಿಯ (BJP) ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಸೇರಿದಂತೆ ಕೆಲವು ಶಾಸಕರು ಇಲ್ಲಿಯೇ ವಾಸ್ತವ್ಯ ಹೂಡುತ್ತಾರೆ ಎನ್ನಲಾಗಿದೆ. ಅವರ ಮೇಲೆ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಶಾಸಕರ ಭವನದಲ್ಲಿರುವ ಅವರ ಕೊಠಡಿಗಳಿಗೆ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.
ಕೊಡಗಿನಲ್ಲಿ ನಡೆದ ಘಟನೆ ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಬಿಜೆಪಿ ನಾಯಕರ ಭಾವಚಿತ್ರಗಳ ಮೇಲೆ ಮೊಟ್ಟೆ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಮಂಡ್ಯ: ಮೊಟ್ಟೆ ತಿಂದು ಕಾಂಗ್ರೆಸ್, ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ







