ಬಿಲ್ಕಿಸ್ ಬಾನುಗೆ ನ್ಯಾಯ ನಿರಾಕರಣೆ ಖಂಡಿಸಿ ‘ವಿಮ್’ ಪ್ರತಿಭಟನೆ

ಮಂಗಳೂರು: ಗುಜರಾತ್ ಹತ್ಯಾಕಾಂಡದ ಸಂದರ್ಭದ ಸಂತ್ರಸ್ತೆ ಬಿಲ್ಕಿಸ್ ಬಾನು ಅವರಿಗೆ ನ್ಯಾಯ ನಿರಾಕರಿಸಿ ರುವುದನ್ನು ಖಂಡಿಸಿ ವಿಮೆನ್ಸ್ ಇಂಡಿಯ ಮೂವ್ಮೆಂಟ್ (ವಿಮ್) ದ.ಕ.ಜಿಲ್ಲಾ ಸಮಿತಿಯು ಶನಿವಾರ ನಗರದ ಹಂಪನಕಟ್ಟೆಯ ಕ್ಲಾಕ್‌ಟವರ್ ಬಳಿ ಪ್ರತಿಭಟನೆ ನಡೆಯಿತು.
ಗೋದ್ರಾ ಘಟನೆಯ ನಂತರ ಗುಜರಾತನ್ನು ವ್ಯಾಪಿಸಿದ ಸಾಮೂಹಿಕ ಹತ್ಯಾಕಾಂಡ, ಅತ್ಯಾಚಾರ, ಅಗ್ನಿಸ್ಪರ್ಶದ ಭೀಕರ ಸರಣಿಯಲ್ಲಿ ಬದುಕುಳಿದ ಬಿಲ್ಕಿಸ್ ಬಾನು ನ್ಯಾಯದ ನಿರೀಕ್ಷೆಯಲ್ಲಿದ್ದರು. ಆದರೆ, ಆಡಳಿತ ವ್ಯವಸ್ಥೆಯು ಬಿಲ್ಕಿಸ್ ಬಾನು ಮೇಲೆ ದೌರ್ಜನ್ಯ ಎಸಗಿದ್ದ 11 ಮಂದಿ ಅಪರಾಧಿಗಳನ್ನು ಸನ್ನಡತೆಯ ಆಧಾರದ ಮೇಲೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭ ಬಿಡುಗಡೆಗೊಳಿಸುವ ಮೂಲಕ ಆಕೆಗೆ ನ್ಯಾಯ ನಿರಾಕರಿಸಿದೆ. ಇದರಿಂದ ದೇಶದಲ್ಲಿ ಮಹಿಳೆಯರ ಸುರಕ್ಷತೆಗೆ ಧಕ್ಕೆಯಾಗಿದೆ ಎಂದು ಎಸ್‌ಡಿಪಿಐ ದ.ಕ. ಜಿಲ್ಲಾ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು ಆರೋಪಿಸಿದರು.
ವಿಮೆನ್ಸ್ ಇಂಡಿಯಾ ಮೂವ್ಮೆಂಟ್‌ನ ರಾಷ್ಟ್ರೀಯ ಸದಸ್ಯೆ ನೌರಿನ್ ಅಲಂಪಾಡಿ, ವಿಮ್ ಬಂಟ್ವಾಳ ತಾಲೂಕು ಅಧ್ಯಕ್ಷೆ ಶಾಕಿರ ಬಂಟ್ವಾಳ, ವಿಮ್ ದ.ಕ.ಜಿಲ್ಲಾ ಮಾಧ್ಯಮ ಸಂಯೋಜಕಿ ಝಹನಾ ಬಿ.ಸಿ.ರೋಡ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.