ಹಿಜಾಬ್ ನಿಷೇಧ: ಮಂಗಳೂರು ವಿವಿಯಿಂದ ಟಿಸಿ ಪಡೆದ 16% ಮುಸ್ಲಿಂ ವಿದ್ಯಾರ್ಥಿನಿಯರು

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಉಪಕುಲಪತಿ ಪ್ರೊ.ಪಿ.ಎಸ್.ಯಡ್ಪಾಡಿತ್ತಾಯ ಅವರು ಈ ವರ್ಷದ ಮೇ ತಿಂಗಳಲ್ಲಿ ಹಿಜಾಬ್ ಇಲ್ಲದೆ ತರಗತಿಗಳಿಗೆ ಹಾಜರಾಗಲು ಹಿಂದೇಟು ಹಾಕುವ ವಿದ್ಯಾರ್ಥಿಗಳಿಗೆ ಟಿಸಿ (ವರ್ಗಾವಣೆ ಪ್ರಮಾಣಪತ್ರ) ನೀಡುವ ಕುರಿತು ಘೋಷಣೆ ಮಾಡಿದ ಬಳಿಕ ಮಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಎರಡನೇ, ಮೂರನೇ, ನಾಲ್ಕನೇ ಮತ್ತು ಐದನೇ ಸೆಮಿಸ್ಟರ್‌ಗಳ 16% ಕ್ಕಿಂತ ಹೆಚ್ಚು ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಟಿಸಿಗಳನ್ನು ಪಡೆದಿದ್ದಾರೆ.
ಡೆಕ್ಕನ್ ಹೆರಾಲ್ಡ್ ಪತ್ರಿಕೆಯು ಆರ್‌ಟಿಐ (RTI) ಅಡಿಯಲ್ಲಿ ಪಡೆದ ಮಾಹಿತಿಯ ಪ್ರಕಾರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮಂಗಳೂರು ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಸರ್ಕಾರಿ, ಅನುದಾನಿತ ಮತ್ತು ಘಟಕ ಕಾಲೇಜುಗಳಿಂದ 2020-21 ಮತ್ತು 2021-22 ರಲ್ಲಿ ವಿವಿಧ ಕೋರ್ಸ್‌ಗಳಿಗೆ ದಾಖಲಾದ ಒಟ್ಟು 900 ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ 145 ವಿದ್ಯಾರ್ಥಿಗಳು ಟಿಸಿಯನ್ನು ಪಡೆದಿದ್ದಾರೆ.
ಕೆಲವರು ಹಿಜಾಬ್ ಧರಿಸಲು ಅನುಮತಿ ಇರುವ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದರೆ, ಇನ್ನು ಕೆಲವರು ಶುಲ್ಕ ಪಾವತಿಸಲು ಸಾಧ್ಯವಾಗದ ಕಾರಣದಿಂದ ವಿಧ್ಯಾಭ್ಯಾಸವನ್ನು ಸಂಪೂರ್ಣವಾಗಿ ತೊರೆದಿದ್ದಾರೆ. ಆದರೆ, ಕೊಡಗು ಜಿಲ್ಲೆಯಲ್ಲಿ ಎಲ್ಲಾ 113 ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಕಾಲೇಜುಗಳಲ್ಲಿ ಓದುವುದನ್ನು ಮುಂದುವರೆಸಿದ್ದಾರೆ ಎಂದು DeccanHerald.com ವರದಿ ಮಾಡಿದೆ.
ಅನುದಾನಿತ ಕಾಲೇಜುಗಳಿಗೆ ಹೋಲಿಸಿದರೆ ಸರ್ಕಾರಿ ಕಾಲೇಜುಗಳಲ್ಲಿ TC ಪಡೆಯುವ ಮುಸ್ಲಿಂ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 39 ಸರಕಾರಿ, 36 ಅನುದಾನಿತ ಕಾಲೇಜುಗಳಿವೆ. ಉಡುಪಿ ಜಿಲ್ಲೆಯಲ್ಲಿ (14%) ವರ್ಗಾವಣೆ ಬಯಸಿದ ವಿದ್ಯಾರ್ಥಿಗಳ ಸಂಖ್ಯೆ ದಕ್ಷಿಣ ಕನ್ನಡ ಜಿಲ್ಲೆಗಿಂತ (13%) ಹೆಚ್ಚಾಗಿದೆ. ಟಿಸಿ ಪಡೆದವರ ಕಾಲೇಜುಗಳ ಪೈಕಿ ದಕ್ಷಿಣ ಕನ್ನಡದ ಸರ್ಕಾರಿ ಕಾಲೇಜುಗಳಲ್ಲಿ ಕಾರ್‌ಸ್ಟ್ರೀಟ್‌ನಲ್ಲಿರುವ ಡಾ ಪಿ ದಯಾನಂದ ಪೈ-ಪಿ ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಗ್ರಸ್ಥಾನದಲ್ಲಿದೆ, 51 ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ 35 ವಿದ್ಯಾರ್ಥಿನಿಯರು ಈ ಕಾಲೇಜಿನಿಂದ ತಮ್ಮ ಟಿಸಿ ಸಂಗ್ರಹಿಸಿದ್ದಾರೆ.
ಹಳೇಅಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ, ಮೂರು ಮತ್ತು ನಾಲ್ಕನೇ ಸೆಮಿಸ್ಟರ್‌ನಲ್ಲಿ ತರಗತಿಗೆ ಹಾಜರಾಗಿದ್ದ 20 ವಿದ್ಯಾರ್ಥಿನಿಯರು ದ್ವಿತೀಯ, ನಾಲ್ಕು ಮತ್ತು ಆರನೇ ಸೆಮಿಸ್ಟರ್‌ನಲ್ಲಿದ್ದಾಗ ಟಿಸಿ ಸಂಗ್ರಹಿಸಿದ್ದಾರೆ. “ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುವಂತೆ ಮಾಡಿದ ಮನವಿಯನ್ನು ನಿರ್ಲಕ್ಷಿಸಿದ್ದಾರೆ ಎಂದು ಹೇಳಿದರು. ಅವರು ಟಿಸಿಗಳನ್ನು ಸಹ ಸಂಗ್ರಹಿಸಲಿಲ್ಲ “ ಎಂದು ಕಾಲೇಜು ಪ್ರಾಂಶುಪಾಲ ಶ್ರೀಧರ್ ಡೆಕ್ಕನ್ ಹೆರಾಲ್ಡ್ ಗೆ ತಿಳಿಸಿದ್ದಾರೆ.
ಹಿಜಾಬ್ ವಿವಾದದ ಕೇಂದ್ರಬಿಂದುವಾಗಿರುವ ಅಜ್ಜರಕಾಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಡುಪಿ ಜಿಲ್ಲೆಯ ಸರ್ಕಾರಿ ಕಾಲೇಜುಗಳ ಪಟ್ಟಿಯಲ್ಲಿ ಒಂಬತ್ತು ವಿದ್ಯಾರ್ಥಿಗಳು ಟಿಸಿ ಸಂಗ್ರಹಿಸುವ ಮೂಲಕ ಅಗ್ರಸ್ಥಾನದಲ್ಲಿದೆ.







