ಬೃಹತ್ ಜನಾಂದೋಲನ ಕಟ್ಟಿದರೆ ಮಾತ್ರ ನಮಗೆ ಭವಿಷ್ಯ: ಶಿವಸುಂದರ್
'ರಾಜಕೀಯ ಕೈದಿಗಳ ಅವ್ಯವಸ್ಥೆ; ಮಾನವ ಹಕ್ಕುಗಳ ಬಿಕ್ಕಟ್ಟು' ವಿಚಾರಗೋಷ್ಠಿ

ಬೆಂಗಳೂರು, ಆ.20: ಪ್ರಧಾನಿ ಮೋದಿ ಕೆಂಪುಕೋಟೆ ಮೇಲೆ ನಿಂತು ನಾರಿ ಶಕ್ತಿ ಬಗ್ಗೆ ಮಾತನಾಡುತ್ತಿರುವಾಗ, 2002ರಲ್ಲಿ ಗುಜರಾತ್‍ನಲ್ಲಿ ನಡೆದ ಬಿಲ್ಕೀಸ್ ಬಾನು ಅವರ ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಆರೋಪಿಗಳನ್ನು ಸನ್ನಡತೆ ಆಧಾರದಲ್ಲಿ ಅಲ್ಲಿನ ಸರಕಾರ ಕ್ಷಮಾದಾನ ಕೊಟ್ಟು ಬಿಡುಗಡೆ ಮಾಡಿದೆ. ಇದು ನಮ್ಮ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಜವಾದ ಚಿತ್ರಣ ಎಂದು ಸಾಮಾಜಿಕ ಹೋರಾಟಗಾರ ಶಿವಸುಂದರ್ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಘಟಕದ ವತಿಯಿಂದ ಆಯೋಜಿಸಲಾಗಿದ್ದ ‘ರಾಜಕೀಯ ಕೈದಿಗಳ ಅವ್ಯವಸ್ಥೆ; ಮಾನವ ಹಕ್ಕುಗಳ ಬಿಕ್ಕಟ್ಟು’ ಕುರಿತ ವಿಚಾರಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಸಂಘಪರಿವಾರಕ್ಕೆ ಸೇರಿದ್ದ ಆ 11 ಜನ ಆರೋಪಿಗಳು ಬಿಲ್ಕೀಸ್ ಬಾನು ಅವರನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಲ್ಲದೆ, ಅವರ ಕಣ್ಣ ಎದುರೆ ಒಂದು ಮಗವನ್ನು ಹಾಗೂ ತಪ್ಪಿಸಿಕೊಂಡು ಓಡುತ್ತಿದ್ದ ಆರು ಜನರನ್ನು ಕೊಂದು ಹಾಕಿದರು. ಇಂತಹ ಸುಮಾರು 4,500 ಪ್ರಕರಣಗಳನ್ನು ಅಂದು ಗುಜರಾತ್ ರಾಜ್ಯದ ಪೊಲೀಸರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು ಎಂದು ಅವರು ಹೇಳಿದರು.
ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಮಧ್ಯಪ್ರವೇಶಿಸಿ ಇಂತಹ ಪ್ರಕರಣಗಳನ್ನು ಸುಪ್ರೀಂಕೋರ್ಟ್‍ವರೆಗೆ ತೆಗೆದುಕೊಂಡು ಹೋದರು. ಸಿಬಿಐ ತನಿಖೆಯಿಂದ ಬಿಲ್ಕೀಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರವಾಗಿದ್ದು ರುಜುವಾತಾಗಿ ನ್ಯಾಯಾಲಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯನ್ನು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು ಎಂದು ಅವರು ಹೇಳಿದರು.
ಆದರೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನದಂದೆ ಆ 11 ಜನ ಆರೋಪಿಗಳನ್ನು ಸನ್ನಡತೆ ಆಧಾರದಲ್ಲಿ ಕ್ಷಮಾದಾನ ನೀಡಿ ಬಿಡುಗಡೆ ಮಾಡಲಾಗಿದೆ. ಅವರು ಬ್ರಾಹ್ಮಣರು, ಸಂಸ್ಕಾರವಂತರು, ಇದಕ್ಕಿಂತ ಸನ್ನಡತೆಯ ಪ್ರಮಾಣಪತ್ರ ಬೇಕೆ? ಸಂಘಪರಿವಾರಕ್ಕೆ ಸೇರಿದವರಿಗೆ ಒಂದು ಕಾನೂನು, ಸೇರದವರಿಗೆ ಒಂದು ಕಾನೂನು ಎಂದು ಶಿವಸುಂದರ್ ಅಸಮಾಧಾನ ವ್ಯಕ್ತಪಡಿಸಿದರು.
ಉತ್ತರಪ್ರದೇಶದ ಹತ್ರಾಸ್‍ನಲ್ಲಿ ಮನಿಷಾ ಎಂಬ ದಲಿತ ಹೆಣ್ಣು ಮಗಳಿಗೆ, ಠಾಕೂರ್ ಜಾತಿಗೆ ಸೇರಿದ ನಾಲ್ವರು ಸಾಮೂಹಿಕ ಅತ್ಯಾಚಾರ ಮಾಡಿದರು. ಸಾವು ಬದುಕಿನ ನಡುವೆ ಹೋರಾಟ ಮಾಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಆಕೆಯ ಮೃತ ದೇಹವನ್ನು ಪೋಷಕರಿಗೂ ನೀಡದೆ, ಸಾಕ್ಷಾಧ್ಯಾರಗಳನ್ನು ನಾಶಪಡಿಸಲು ಪೊಲೀಸರೆ ಆಕೆಯ ದೇಹವನ್ನು ಸುಟ್ಟುಹಾಕಿದರು ಎಂದು ಶಿವಸುಂದರ್ ತಿಳಿಸಿದರು.
ಈ ಘಟನೆಯ ವರದಿ ಮಾಡಲು ತೆರಳಿದ್ದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರನ್ನು ಉತ್ತರಪ್ರದೇಶದಲ್ಲಿ ಗಲಭೆಗೆ ಪ್ರಚೋದನೆ ನೀಡಲು ಬಂದಿದ್ದ ಎಂದು 2020ರ ಅಕ್ಟೋಬರ್‍ನಲ್ಲಿ ಬಂಧಿಸಲಾಯಿತು. ಈವರೆಗೆ ಆತ ಜೈಲಿನಲ್ಲಿದ್ದಾನೆ. ನರೇಂದ್ರ ಮೋದಿ ಸರಕಾರದ ಆರ್ಥಿಕ, ಸಾಮಾಜಿಕ ನೀತಿಗಳ ವಿರುದ್ಧ ಹೋರಾಡುವವರ ಧ್ವನಿ ಅಡಗಿಸಲಾಗುತ್ತಿದೆ ಎಂದು ಅವರು ಹೇಳಿದರು.
ಅದೇ ರೀತಿ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ 14 ಮಂದಿ ಹೋರಾಟಗಾರರನ್ನು ಪೆಗಾಸಸ್ ತಂತ್ರಜ್ಞಾನ ಬಳಸಿ, ಆರೋಪಿತರನ್ನಾಗಿಸಿ ಜೈಲಿಗೆ ಅಟ್ಟಲಾಗಿದೆ. ನಾವು ಯಾರ ಪರವಾಗಿ ಹೋರಾಟ ಮಾಡುತ್ತಿದ್ದೇವೋ ಅವರು ಎಚ್ಚೆತ್ತುಕೊಳ್ಳಬೇಕು. ತುಂಬಾ ಗಂಭೀರವಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಯಾವ ರಾಜಕೀಯ ಪಕ್ಷವನ್ನೂ ನೆಚ್ಚಿಕೊಳ್ಳುವಂತಹ ಪರಿಸ್ಥಿತಿ ಇಲ್ಲ ಎಂದು ಶಿವಸುಂದರ್ ಹೇಳಿದರು.
ಯುಎಪಿಎ ಕಾನೂನು ಜಾರಿಗೆ ತಂದದ್ದು ಕಾಂಗ್ರೆಸ್ ಪಕ್ಷ, ತಿದ್ದುಪಡಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಅದಕ್ಕೆ ಎಲ್ಲ ವಿರೋಧ ಪಕ್ಷಗಳು ಸಹಕಾರ ನೀಡಿದವು. ನಾವು ಎಲ್ಲರೂ ಒಂದಾಗಿ, ಬೃಹತ್ ಜನಾಂದೋಲನ ಕಟ್ಟಿದರೆ ಮಾತ್ರ ನಮಗೆ ಭವಿಷ್ಯ. ಇಲ್ಲದಿದ್ದರೆ, ಎಂತಹ ಮೃಗಗಳ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂಬುದು ಬಿಲ್ಕೀಸ್ ಬಾನು ಪ್ರಕರಣದಿಂದ ಸಾಬೀತಾಗಿದೆ ಎಂದು ಅವರು ಎಚ್ಚರಿಸಿದರು.
ಸತ್ಯ ಜೈಲಿನಲ್ಲಿದೆ, ಸುಳ್ಳು ಬೀದಿ ಬೀದಿಗಳಲ್ಲಿ ಬಂದೂಕು, ತ್ರಿಶೂಲ ಹಿಡಿದುಕೊಂಡು ನಿಂತಿದೆ. ತೀಸ್ತಾ ಸೆಟಲ್ವಾಡ್ ಜೈಲಿನಲ್ಲಿದ್ದರೆ, ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ಮಾನವ ಹಕ್ಕುಗಳ ಹೋರಾಟಗಾರ ಜಿ.ಎನ್.ಸಾಯಿಬಾಬಾ ಶೇ.98ರಷ್ಟು ದೈಹಿಕ ನ್ಯೂನತೆಯನ್ನು ಹೊಂದಿದ್ದು, ಒಬ್ಬ ಸಹಾಯಕನಿಲ್ಲದೆ ದಿನನಿತ್ಯದ ಕೆಲಸಗಳನ್ನು ಮಾಡಲು ಆಗುವುದಿಲ್ಲ. ಅಂತಹವರ ಮೇಲೆ ನರೇಂದ್ರ ಮೋದಿಯ ಕೊಲೆ ಸಂಚಿನ ಆರೋಪ ಹೊರಿಸಲಾಗಿದೆ ಎಂದು ಶಿವಸುಂದರ್ ಹೇಳಿದರು.
ಎರಡು ವರ್ಷದ ನಿಧನ ಹೊಂದಿದ ಅವರ ತಾಯಿ ಅಂತಿಮ ದರ್ಶನ ಪಡೆಯಲು ನ್ಯಾಯಾಲಯ ಜಾಮೀನು ನೀಡಿಲ್ಲ. ಕಾರಣ, ಇವರು ತಪ್ಪಿಸಿಕೊಂಡು ಓಡು ಹೋಗಬಹುದೆಂದು. ಇದಕ್ಕೆ ತದ್ವಿರುದ್ಧವಾಗಿ 2002ರ ಗುಜರಾತ್ ನರಮೇಧದಲ್ಲಿ ಕೌಸರ್ ಬಾನು ಎಂಬ ಹೆಣ್ಣು ಮಗಳ ಹೊಟ್ಟೆಯಲ್ಲಿದ್ದ ಭ್ರೂಣವನ್ನು ತ್ರಿಶೂಲದಲ್ಲಿ ಚುಚ್ಚಿ ಮೆರವಣಿಗೆ ಮಾಡಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಬಾಬಾ ಬಜರಂಗಿಗೆ ಕಣ್ಣು ಸರಿಯಾಗಿ ಕಾಣುತ್ತಿಲ್ಲವೆಂದು ನ್ಯಾಯಾಲಯ ಶಾಶ್ವತ ವೈದ್ಯಕೀಯ ಜಾಮೀನು ನೀಡುತ್ತೆ ಎಂದು ಅವರು ಹೇಳಿದರು.
ವಿಚಾರಗೋಷ್ಠಿಯಲ್ಲಿ ಹೈಕೋರ್ಟ್ ನ್ಯಾಯವಾದಿ ಪಿ.ಉಸ್ಮಾನ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೊಕೇಟ್ ತಾಹೇರ್ ಹುಸೇನ್, ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







