ಅಡಿಕೆ ಮೇಲೆ GST ಹೆಚ್ಚಳ; ಕೇಂದ್ರ ಸರಕಾರದ ನಡೆಗೆ ಸಿದ್ದರಾಮಯ್ಯ ಖಂಡನೆ

ಬೆಂಗಳೂರು, ಆ.20: ವಿದೇಶಿ ಅಡಿಕೆಯ ಆಮದಿನ ಮೇಲಿನ ಅಬಕಾರಿ ಸುಂಕವನ್ನು ಶೇ.110 ರಷ್ಟು ಕಡಿಮೆ ಮಾಡಿ, ನಮ್ಮ ರೈತರು ಬೆಳೆಯುವ ಅಡಿಕೆ ಮೇಲಿನ ಜಿಎಸ್ಟಿ ಹೆಚ್ಚಳ ಮಾಡಲು ಕೇಂದ್ರ ಸರಕಾರ ಮುಂದಾಗಿರುವುದನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಲೆನಾಡು ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ತೆರಳಿದ್ದಾಗ ಮಲೆನಾಡಿನ ರೈತರು ಮತ್ತು ಅಡಿಕೆ ಬೆಳೆಗಾರರು ತಮ್ಮನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ತಮ್ಮ ಸಮಸ್ಯೆಗಳನ್ನು ನಿವೇದಿಸಿಕೊಂಡರೂ ಯಾವುದೇ ಪ್ರಯೋಜನವಾಗುವ ಬದಲಿಗೆ ಸಮಸ್ಯೆ ಬಿಗಡಾಯಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈಗಾಗಲೇ ಅಡಿಕೆ ಬೆಳೆಗೆ ಕೊಳೆ ರೋಗ, ಹಳದಿ ಎಲೆ, ಚುಕ್ಕೆ ರೋಗವೂ ಕಾಡುತ್ತಿದೆ. ಸಾಲದ್ದಕ್ಕೆ ವಿಪರೀತ ಮಳೆ ಹಾಗೂ ಮಂಗಗಳ ಹಾವಳಿಯಿಂದ ಅಡಿಕೆ ಗೊನೆಗಳು ನೆಲೆಕಚ್ಚುತ್ತಲೇ ಇವೆ. ಇವೆಲ್ಲದರಿಂದ ಸಣ್ಣ ಪುಟ್ಟ ಅಡಿಕೆ ಬೆಳೆಗಾರರು ಬೀದಿಗೆ ಬೀಳುವಂತಾಗಿ, ಮಧ್ಯಮ ಮಟ್ಟದ ಬೆಳೆಗಾರರ ಆದಾಯ ಅಷ್ಟಕಷ್ಟು ಎನ್ನುವಂತಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಇಷ್ಟೆಲ್ಲಾ ಸಂಕಟಗಳ ನಡುವೆ ಗಾಯದ ಮೇಲೆ ಬರೆ ಎಳೆದಂತೆ ಕೇಂದ್ರ ಸರಕಾರ ನಮ್ಮ ಅಡಿಕೆಯ ಮೇಲೆ ಜಿಎಸ್ಟಿ ಹೆಚ್ಚಿಸುತ್ತಾ, ವಿದೇಶದಿಂದ ಬರುವ ಆಮದು ಅಡಿಕೆ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುತ್ತಿದೆ. ‘ದೇಶಕ್ಕೆ ಮಾರಿ ನೆರೆ ದೇಶಕ್ಕೆ ಉಪಕಾರಿ’ಯಂತಾಗುತ್ತಿರುವ ಕೇಂದ್ರ ಸರಕಾರದ ನೀತಿಗಳು ಯಾವ ದುಡಿಯುವ ವರ್ಗಗಳು ಮತ್ತು ರೈತರನ್ನೂ ತಮ್ಮ ಪಾಡಿಗೆ ತಾವು ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ. ಈಗ ಕೇಂದ್ರ ಸರಕಾರದ ಕೆಟ್ಟ ದೃಷ್ಟಿ ಅಡಿಕೆ ಬೆಳೆಗಾರರ ಮೇಲೆ ಬಿದ್ದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಅಡಿಕೆಯ ಕನಿಷ್ಠ ಆಮದು ದರ 110ರೂ. ಇದ್ದಾಗ ಕ್ವಿಂಟಾಲ್ ಅಡಿಕೆ ಬೆಲೆ ಸರಾಸರಿ 75 ಸಾವಿರ ರೂಪಾಯಿ ಇತ್ತು. ಈಗ ಕನಿಷ್ಠ ಆಮದು ದರ 251 ರೂ. ಇದೆ. ಆದರೂ ಅಡಿಕೆ ಬೆಲೆ ಕ್ವಿಂಟಾಲ್‍ಗೆ 50 ಸಾವಿರಕ್ಕೆ ಕುಸಿದಿದೆ. ಇದಕ್ಕೆ ಕಾರಣ ವ್ಯಾಪಕ ಅಡಿಕೆ ಕಳ್ಳ ಸಾಗಣೆ. ಸರಕಾರಿ ಒಡೆತನದ ಬಂದರು ಅದಾನಿ ಮುಂತಾದ ಖಾಸಗಿ ಒಡೆತನಕ್ಕೆ ಹೋದ ಬಳಿಕ ಅಡಿಕೆ ಕಳ್ಳ ಸಾಗಣೆ ಹೆಚ್ಚಾಗಿ ಪ್ರತಿ ವರ್ಷ ಸರಕಾರಕ್ಕೆ 15 ಸಾವಿರ ಕೋಟಿ ರೂ.ಗಳಷ್ಟು ತೆರಿಗೆ ನಷ್ಟವಾಗುತ್ತಿದೆ ಎನ್ನುವ ವರದಿಗಳಿವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
2021ರ ಜೂನ್‍ನಲ್ಲಿ ಸಿಬಿಐ ದೇಶದ 19 ಗೋದಾಮುಗಳ ಮೇಲೆ ದಾಳಿ ನಡೆಸಿ ಅಡಿಕೆ ಕಳ್ಳಸಾಗಣೆಯನ್ನು ಪತ್ತೆಹಚ್ಚಿ ಕಾಳಸಂತೆಕೋರರನ್ನು ಬಂಧಿಸಿದ್ದರಿಂದ ಕುಸಿತ ಕಂಡಿದ್ದ ಅಡಿಕೆ ದರ ಏರಿಕೆಯಾಗಿತ್ತು. ಈಗ ಮತ್ತೆ ಕಳ್ಳಸಾಗಣೆ, ಕಾಳಸಂತೆ ಮಾರಾಟ ಹೆಚ್ಚಾಗಿ ಅಡಿಕೆ ದರ ಕುಸಿಯುತ್ತಿರುವ ಹೊತ್ತಲ್ಲೇ ಕೇಂದ್ರ ಸರಕಾರ ಅಡಿಕೆ ಬೆಳೆಗಾರರ ಮೇಲೆ ದಾಳಿ ನಡೆಸುತ್ತಿದೆ ಎಂದು ಅವರು ಕಿಡಿಗಾರಿದ್ದಾರೆ.
ಹಿಂದೆ ನಮ್ಮ ಸರಕಾರ ಇದ್ದಾಗ ಕೊಳೆರೋಗದಿಂದ ಕಂಗಾಲಾದ, ಮತ್ತಿತರ ಸಮಸ್ಯೆಗಳಿಗೆ ಸಿಲುಕಿದ್ದ ಅಡಿಕೆ ಬೆಳೆಗಾರರಿಗೆ 40 ಕೋಟಿ ರೂ.ಪರಿಹಾರ ನೀಡಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಡಿಕೆ ಸುಲಿಯುವ ಯಂತ್ರ, ಸಂಸ್ಕರಣಾ ಯಂತ್ರ ಮತ್ತು ಘಟಕಗಳಿಗೆ ಸೇರಿದಂತೆ ಇನ್ನಿತರೆ ಅಗತ್ಯಗಳಿಗೆ ಸಬ್ಸಿಡಿ ನೀಡಿತ್ತು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಪ್ರಚಾರಕ್ಕೆಂದು ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಲೆನಾಡಿನಲ್ಲಿ ಅಡಿಕೆ ಸಂಶೋಧನಾ ಕೇಂದ್ರ ತೆರೆಯುವುದಾಗಿ ಹೇಳಿ ಹೋದವರು ಇವತ್ತಿಗೂ ಈ ವಿಚಾರದ ಬಗ್ಗೆ ಗಮನ ಹರಿಸಿಲ್ಲ ಎಂದು ಅವರು ಹೇಳಿದ್ದಾರೆ.
ಇದೇ ತೀರ್ಥಹಳ್ಳಿ ಕ್ಷೇತ್ರದಿಂದ ಚುನಾಯಿತರಾಗಿ ರಾಜ್ಯ ಗೃಹ ಸಚಿವರೂ ಆಗಿರುವ ಆರಗ ಜ್ಷಾನೇಂದ್ರ ಅವರೇ ಅಡಿಕೆ ಸಮಸ್ಯೆ ಬಗೆಹರಿಸುವ ಸಲುವಾಗಿ ರಚಿಸಲಾಗಿರುವ ಟಾಸ್ಕ್ ಫೋರ್ಸ್‍ನ ಅಧ್ಯಕ್ಷರೂ ಆಗಿದ್ದಾರೆ. ಆದರೆ, ಈ ಟಾಸ್ಕ್ ಫೋರ್ಸ್ ಸಭೆಗಳೂ ಸಮರ್ಪಕವಾಗಿ ನಡೆಯುತ್ತಿಲ್ಲ. ಬೆಳೆಗಾರರ ಸಮಸ್ಯೆಗಳನ್ನು ಟಾಸ್ಕ್ ಫೋರ್ಸ್ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸಿದ್ದರಾಮಯ್ಯ ಕಿಡಿಗಾರಿದ್ದಾರೆ.
ಬರ್ಮಾ, ಮ್ಯಾನ್ಮಾರ್ ಮೂಲಕ ಭಾರತಕ್ಕೆ ಬರುವ ವಿದೇಶಗಳ ಆಮದು ಅಡಿಕೆಯ ಮೇಲೆ ಅಬಕಾರಿ ಸುಂಕ ಹೆಚ್ಚಿಸಬೇಕು ಎಂದು ಸ್ಥಳೀಯ ಅಡಿಕೆ ಬೆಳೆಗಾರರು ಹತ್ತಾರು ಬಾರಿ ಮನವಿ ಮಾಡಿದ್ದಾರೆ. ಬೆಳೆಗಾರರ ನಿಯೋಗ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಈ ಕುರಿತು ಕೇಂದ್ರ ಸಚಿವರನ್ನು ಭೇಟಿಯಾಗಿ ಮನವಿ ಮಾಡಿದ್ದರೂ ಕೇಂದ್ರ ಸರಕಾರ ಮನವಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಮತ್ತು ಬೆಳೆಗಾರರಿಗೆ ನೆಮ್ಮದಿಯ ಭರವಸೆ ನೀಡಿಲ್ಲ ಎಂದು ಅವರು ಟೀಕಿಸಿದ್ದಾರೆ.
ಅಡಿಕೆ, ಮೆಣಸು, ರಬ್ಬರ್ ಬೆಳೆಗಾರರ ಸಮಸ್ಯೆಗಳು ಸೇರಿದಂತೆ ಭೂ ಕುಸಿತ, ಬೆಳೆ ನಾಶ, ಪ್ರವಾಹದಿಂದಾಗಿ ಇಡೀ ಮಲೆನಾಡು ಮೈತುಂಬ ಗಾಯ ಮಾಡಿಕೊಂಡು ಇಲ್ಲಿನ ಬದುಕು ಹೈರಾಣಾಗುತ್ತಿರುವುದನ್ನು ನಾನು ಎರಡು ಜಿಲ್ಲೆಗಳ ಪ್ರವಾಸದಲ್ಲಿ ಅರಿತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಹೀಗಾಗಿ ಅಡಿಕೆ ಮೇಲಿನ ಜಿಎಸ್‍ಟಿಯನ್ನು ರದ್ದುಗೊಳಿಸಲು ಮತ್ತು ಆಮದು ಅಡಿಕೆ ಮೇಲೆ ಅಬಕಾರಿ ಸುಂಕ ಹೆಚ್ಚಿಸಲು ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಕೇಂದ್ರ ಸರ್ಕಾರ ಬೆಳೆಗಾರರ ಆಗ್ರಹಕ್ಕೆ ಮನ್ನಣೆ ನೀಡಿ ಅಡಿಕೆಯನ್ನು ಆಕ್ರಮಿಸಿರುವ ರೋಗಗಳಿಗೆ ಸೂಕ್ತ ಪರಿಹಾರವನ್ನು ಕಂಡು ಹಿಡಿಯಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಮಲೆನಾಡಿನ ಯುವಕರು ಇವುಗಳ ಬಗ್ಗೆ ಧ್ವನಿ ಎತ್ತುವುದನ್ನು ಬಿಟ್ಟು ತಮ್ಮ ಬದುಕಿಗೆ ಸಂಬಂಧವೇ ಇಲ್ಲದ ಸಾವರ್ಕರ್ ವಿಚಾರದಲ್ಲಿ ರಂಪಾಟ ಮಾಡುತ್ತಾ ತಮ್ಮ ಬದುಕನ್ನು ಬಲಿ ಕೊಡುತ್ತಿರುವುದು ಬಹಳ ದುಃಖದ ಸಂಗತಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.







