ಭ್ರಷ್ಟಾಚಾರವು ಕ್ಯಾನ್ಸರ್ ಗಿಂತಲೂ ಅಪಾಯಕಾರಿ: ನ್ಯಾ. ಎಚ್.ಪಿ. ಸಂದೇಶ್

ಬೆಂಗಳೂರು, ಆ.20: ಭ್ರಷ್ಟಾಚಾರವು ಕ್ಯಾನ್ಸರ್ ಗಿಂತಲೂ ಅಪಾಯಕಾರಿಯಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯು ಸ್ವ-ಆತ್ಮಾವಲೋಕನದೊಂದಿಗೆ ಮನಸ್ಸನ್ನು ಶುದ್ಧೀಕರಣಗೊಳಿಸಿಕೊಂಡು ಉತ್ತಮ ಕೆಲಸಗಳನ್ನು ನಿರ್ವಹಿಸಬೇಕು ಎಂದು ನ್ಯಾ.ಎಚ್.ಪಿ. ಸಂದೇಶ್ ಕರೆ ನೀಡಿದ್ದಾರೆ.
ಶನಿವಾರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ರಂಜನ್ ಗೊಗೊಯ್ ಬರೆದಿರುವ "ಜಸ್ಟಿಸ್ ಫಾರ್ ದಿ ಜಡ್ಜ್" ಪುಸ್ತಕದ ಚರ್ಚೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾಮಾಣಿಕತೆ, ಪಾರದರ್ಶಕತೆ ಇರುವವರಿಗೆ ಧೈರ್ಯ ಹಾಗೂ ಎದೆಗಾರಿಕೆ ಇರುತ್ತದೆ. ನ್ಯಾಯಮೂರ್ತಿ ರಂಜನ್ ಗೊಗಾಯ್ ಬರೆದಿರುವ ಆತ್ಮಚರಿತ್ರೆ ಅದಕ್ಕೆ ಉತ್ತಮ ನಿದರ್ಶನವಾಗಿದೆ ಎಂದರು.
ಇದನ್ನೂ ಓದಿ... ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ: ಹೈಕೋರ್ಟ್ ಅಸಮಾಧಾನ
ನ್ಯಾಯಮೂರ್ತಿಗಳು, ಸಂಸ್ಥೆಯ ಹೊರಗಡೆ ಹಾಗೂ ಒಳಗಡೆ ಬರುವ ಎಲ್ಲಾ ಒತ್ತಡಗಳನ್ನು ಸಮರ್ಥವಾಗಿ ಎದುರಿಸಿ, ಹಲವು ಐತಿಹಾಸಿಕ ಪ್ರಕರಣಗಳಲ್ಲಿ ತಮ್ಮ ಉತ್ತಮ ತೀರ್ಪುಗಳ ಮೂಲಕ ನ್ಯಾಯದಾನ ಮಾಡಿರುವುದು ನಿಜಕ್ಕೂ ಶ್ಲಾಘನೀಯವಾದದು. ಯಾವುದೇ ಬೆದರಿಕೆಗಳಿಗೆ ಅಳುಕದೆ ಧೈರ್ಯವಾಗಿ ನ್ಯಾಯವನ್ನು ಎತ್ತಿ ಹಿಡಿಯುವ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ಪ್ರಾಮಾಣಿಕತೆ(ಹಾನೆಸ್ಟಿ), ಹೃದಯ(ಹಾರ್ಟ್) ಹಾಗೂ ನಮ್ಮ ಕೈಗಳು(ಹ್ಯಾಂಡ್ಸ್) ಎಂಬ ಮೂರು "ಹೆಚ್" ಶುದ್ಧವಾಗಿದ್ದರೆ ಅದ್ಭುತ ಕೆಲಸಗಳನ್ನು ಮಾಡಬಹುದು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಈ ಮೂರು ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರತಿಯೊಬ್ಬ ವ್ಯಕ್ತಿಯು ಸಮರ್ಥವಾಗಿ ಕೆಲಸ ನಿರ್ವಹಿಸಿದರೆ, ದೇಶದ ಒಳಿತನ್ನು ಕಾಪಾಡುವುದರ ಜೊತೆಗೆ ಭ್ರಷ್ಟಾಚಾರವನ್ನು ತೊಲಗಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜಯಕರ, ಕುಲಸಚಿವ ಪ್ರೊ. ಕೊಟ್ರೇಶ್, ವಿಶ್ವವಿದ್ಯಾಲಯ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ. ಸುರೇಶ್ ವಿ. ನಾಡಗೌಡರ ಉಪಸ್ಥಿತರಿದ್ದರು.







