ಉಡುಪಿ: ಕಾಂಗ್ರೆಸ್‌ನಿಂದ ರಾಜೀವ ಗಾಂಧಿ, ಅರಸು ಜನ್ಮದಿನಾಚರಣೆ

ಉಡುಪಿ: ರಾಜೀವ ಗಾಂಧಿ ದೇಶದ ಪ್ರಧಾನಿಯಾಗಿದ್ದ ಕಾಲದಲ್ಲಿ ದೇಶದಲ್ಲಿ ದೂರಸಂಪರ್ಕ ಕ್ರಾಂತಿಯೆ ನಡೆಯಿತು. ಹೀಗಾಗಿ ರಾಜೀವ ಗಾಂಧಿ ದೇಶದ ದೂರಸಂಪರ್ಕ ಕ್ರಾಂತಿಯ ಹರಿಕಾರ ಎಂಬ ಪ್ರಶಂಸನೆಗೆ ಪ್ರಾತರಾದರು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಆಶ್ರಯದಲ್ಲಿ ನಾಯರ್‌ಕೆರೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಶನಿವಾರ ಜರಗಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಇಬ್ಬರ ಭಾವಚಿತ್ರಕ್ಕೆ ದೀಪ ಪ್ರಜ್ವಲಿಸಿ, ಪುಷ್ಪಾರ್ಚನೆ ಮಾಡಿ ಮಾತನಾಡುತಿದ್ದರು.
ದೇಶದಲ್ಲಿ ಐಟಿ ಉದ್ಯಮ, ಸಮಗ್ರ ಭಾರತದ ಗ್ರಾಮೀಣ ಪ್ರದೇಶದ ಅಭಿವೃದ್ಧಿ, ದೇಶದಲ್ಲಿ ಅಧಿಕಾರದ ವಿಕೇಂದ್ರೀಕರಣಕ್ಕಾಗಿ ಪಂಚಾಯತ್ ರಾಜ್ ವ್ಯವಸ್ಥೆಯ ಸಬಲೀಕರಣ, 18 ವರ್ಷ ವಯಸ್ಸಿನವರಿಗೆ ಮತದಾನದ ಹಕ್ಕು, ನವೋದಯ ಶಾಲೆಗಳ ನಿರ್ಮಾಣ, ಕಂಪ್ಯೂಟರೀಕರಣದ ಮೂಲಕ ನವ ಭಾರತದ ನಿರ್ಮಾಣಕ್ಕೆ ರಾಜೀವ್ ಕಾರಣರಾದರು. ರಾಜೀವ ಗಾಂಧಿ ಆಡಳಿತ ದಲ್ಲಿ ಅಭಿವೃಧ್ದಿ, ಏಕತೆ, ಶಾಂತಿ, ಕೋಮು ಸಾಮರಸ್ಯ, ನೈತಿಕ ರಾಜಕೀಯ ಮೌಲ್ಯಗಳಿಗೆ ಬೆಲೆ ಕೊಡುತ್ತಿದ್ದರು ಎಂದರು.
ಡಿ.ದೇವರಾಜ ಅರಸು ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಉಳುವವನೇ ಹೊಲದೊಡೆಯ ಕಾನೂನನ್ನು ಪರಿಣಾಮಕಾರಿಯಾಗಿ ರಾಜ್ಯದಲಿ ಜಾರಿಗೊಳಿಸುವ ಮೂಲಕ ಬಡವರಿಗೆ ಆರ್ಥಿಕ ಚೈತನ್ಯ ನೀಡಿದರು. ಋಣಮುಕ್ತ ಕಾಯ್ದೆ ಮೂಲಕ ಜೀತ ಪದ್ದತಿ ಹೋಗಲಾಡಿಸಿ ರಾಜ್ಯದ ಬಡವ ಹಿಂದುಳಿದ ವರ್ಗದವರು ಬದುಕು ಕಟ್ಟಲು ಸಹಾಯ ಮಾಡಿದವರು ಅರಸು. ಇವರಿಬ್ಬರೂ ನಾಡಿನ ಜನತೆಗೆ ಪ್ರಾತಃಸ್ಮರಣೀಯರು ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕೋಆರ್ಡಿನೇಟರ್ ಎ.ಹರೀಶ ಕಿಣಿ ಮತ್ತು ಉದ್ಯಾವರ ನಾಗೇಶ್‌ಕುಮಾರ್ ಸಂದರ್ಭೋಚಿತವಾಗಿ ಮಾತನಾಡಿದರು. ಪ್ರಾರಂಭದಲ್ಲಿ ಆರ್‌ಜಿಪಿಆರ್‌ಎಸ್‌ನ ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್ ಸ್ವಾಗತಿಸಿದರು. ಉಪ ಸಂಯೋಜಕಿ ಮೇರಿ ಡಿಸೋಜ ವಂದಿಸಿದರು.
ಪಕ್ಷದ ಮುಖಂಡರಾದ ವೆರೋನಿಕಾ ಕರ್ನೇಲಿಯೋ, ಕುಶಾಲ್ ಶೆಟ್ಟಿ ಇಂದ್ರಾಳಿ, ರಮೇಶ್ ಕಾಂಚನ್, ಕೀರ್ತಿ ಶೆಟ್ಟಿ, ಪುಷ್ಪ ಅಂಚನ್, ಶಬರೀಶ್ ಸುವರ್ಣ, ಸುಧೀರ್‌ನಾಯಕ್ ಪಟ್ಲ, ಹೆನ್ರಿ ಡಿ ಸೋಜ, ಮರೀನಾ, ಅಬ್ರಹಾಂ ಮೊದಲಾದವರು ಉಪಸ್ಥಿತರಿದ್ದರು.







