ಹಿಂದುಳಿದ ವರ್ಗದವರ ಅಭಿವೃದ್ಧಿಗೆ ದೇವರಾಜ ಅರಸು ಕೊಡುಗೆ ಅಪಾರ : ಸಚಿವ ಎಸ್.ಅಂಗಾರ
► ಅರಸು ಜನ್ಮದಿನಾಚರಣೆ ► ಮಲ್ಪೆ ರಾಘವೇಂದ್ರಗೆ ಅರಸು ಪ್ರಶಸ್ತಿ ಪ್ರದಾನ

ಉಡುಪಿ : ಬಡವರ ಕಲ್ಯಾಣಅಭಿವೃದ್ಧಿ ಯೋಜನೆಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದರೊಂದಿಗೆ ಸಮಾಜದ ಹಿಂದುಳಿದ ವರ್ಗದವರ ಶ್ರೇಯೋಭಿವೃದ್ಧಿಗೆ ಡಿ.ದೇವರಾಜ ಅರಸು ನೀಡಿದ ಕೊಡುಗೆ ಅಪಾರವಾ ದುದು ಎಂದು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದ್ದಾರೆ.
ಶನಿವಾರ ನಗರದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಡಿ.ದೇವರಾಜ ಅರಸು ಅವರ 107ನೇ ಜನ್ಮ ದಿನಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ಡಿ.ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭ, ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಗಳನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕೇಂದ್ರ ಸರಕಾರ ಜಾರಿಗೆ ತಂದ ಭೂಸುಧಾರಣಾ ಕಾಯ್ದೆಯನ್ನು ರಾಜ್ಯಾದ್ಯಂತ ಸಮರ್ಪಕವಾಗಿ ಜಾರಿಗೆ ತರುವುದರೊಂದಿಗೆ ಬಡ ಜನರು ಸಹ ಜಮೀನುಗಳ ಮಾಲಕರಾಗುವಂತೆ ಮಾಡಿದ್ದು, ತನ್ಮೂಲಕ ಅವರು ಆರ್ಥಿಕವಾಗಿ ಅಭಿವೃದ್ಧಿ ಗೊಂಡು ಸ್ವಾವಲಂಬಿಗಳಾಗಲು ಸಹಕಾರಿಯಾಯಿತು ಎಂದರು. ಸಮಾಜ ದಲ್ಲಿದ್ದ ಅತ್ಯಂತ ಅನಿಷ್ಠ ಮಲ ಹೊರುವ ಪದ್ದತಿ ಹಾಗೂ ಜೀತ ಪದ್ದತಿಗಳ ನಿವಾರಣೆಗೆ ಸೂಕ್ತ ಕಾನೂನು ರಚಿಸುವುದರೊಂದಿಗೆ ಅವುಗಳನ್ನು ರಾಜ್ಯದಲ್ಲಿ ನಿರ್ಮೂಲನೆಗೊಳಿಸಲು ದಿಟ್ಟ ಹೆಜ್ಜೆ ಇಟ್ವವರು ಡಿ.ದೇವರಾಜ ಅರಸು ಎಂದು ಅಂಗಾರ ತಿಳಿಸಿದರು.
ಕನಿಷ್ಠ ವೇತನ ಪದ್ದತಿ, ಹಿಂದುಳಿದ ವರ್ಗದವರಿಗೆ ಸರಕಾರಿ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸುವುದ ರೊಂದಿಗೆ ಹಿಂದುಳಿದ ಸಮಾಜವನ್ನು ಮುಂದೆ ತರಲು ಶ್ರಮಿಸಿದರು. ಇದರಿಂದಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಸಹ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಯಿತು. ಅದೇ ರೀತಿ ಬಡ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮೊಟಕುಗೊಳಿಸದಂತೆ ವಿದ್ಯಾರ್ಥಿ ನಿಲರ್ಯಗಳನ್ನು ತೆರೆದು ಅವರಿಗೆ ಅನುಕೂಲ ಮಾಡಿ ಕೊಟ್ಟಿದ್ದರು ಎಂದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರು ಮಾತನಾಡಿ, ವಿದ್ಯಾರ್ಥಿಗಳು ದೇವರಾಜು ಅರಸು ನೀಡಿರುವ ಹಲವು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ ಸಚಿವರು ಮೊತ್ತಮೊದಲ ಜಿಲ್ಲಾ ಮಟ್ಟದ ದೇವರಾಜ ಅರಸು ಪ್ರಶಸ್ತಿಯನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಹಿರಿಯಡ್ಕದ ಮಲ್ಪೆ ರಾಘವೇಂದ್ರ ಅವರಿಗೆ ಪ್ರದಾನ ಮಾಡಿದರು. ಪ್ರಶಸ್ತಿಯು 50ಸಾವಿರ ರೂ.ಗಳ ಚೆಕ್ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿತ್ತು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲೆಯ ವಿವಿಧ ಕರಕುಶಲಕರ್ಮಿಗಳು ತಯಾರಿಸಿದ ವಸ್ತುಗಳ ಮಾರಾಟ ಮತ್ತು ವಸ್ತುಪ್ರದರ್ಶನ ಮೇಳ ಹಾಗೂ ವಿವಿಧ ಇಲಾಖೆಗಳ ಸವಲತ್ತುಗಳ ಮಳಿಗೆ ಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿದರು. ಸಾರ್ವಜನಿಕರು 3 ದಿನಗಳ ಕಾಲ ಈ ಮಳಿಗೆಗಳಿಗೆ ಭೇಟಿ ನೀಡಬಹುದಾಗಿದೆ.
ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಕೂರ್ಮಾರಾವ್, ಜಿಪಂ ಸಿಇಓ ಪ್ರಸನ್ನ ಹೆಚ್, ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ, ಜಿಲ್ಲಾ ಮಟ್ಟದ ದೇವರಾಜ ಅರಸು ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ ವಿಜಯ ಕುಮಾರ್ ಕೊಡವೂರು, ಆರೂರು ತಿಮ್ಮಪ್ಪ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಡಿ.ದೇವರಾಜ ಅರಸು ಕುರಿತು ಡಾ.ದಿನೇಶ್ ಹೆಗ್ಡೆ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ ಸಚಿನ್ ಕುಮಾರ್ ಸ್ವಾಗತಿಸಿದರು.









