ಸಕಲೇಶಪುರ | ಕರು ಸಾಗಿಸುತ್ತಿದ್ದ ದಲಿತ ಯುವಕನ ಮೇಲೆ ಬಜರಂಗ ದಳದ ಕಾರ್ಯಕರ್ತರಿಂದ ಹಲ್ಲೆ: ಆರೋಪ
ಕ್ರಮಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಪೊಲೀಸ್ ಠಾಣೆ ಎದುರು ಪ್ರತಿಭಟನೆ

(ಮಂಜುನಾಥ್ - ಹಲ್ಲೆಗೆ ಒಳಗಾದ ಯುವಕ)
ಸಕಲೇಶಪುರ: ತನ್ನ ಮನೆಗೆ ವಾಹನದಲ್ಲಿ ಕರುವನ್ನು ತೆಗೆದುಕೊಂಡು ಹೋಗುತ್ತಿದ್ದ ದಲಿತ ಯುವಕನ ಮೇಲೆ ಬಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ (Sakleshpura) ಪಟ್ಟಣದ ಹೊಸ ಬಸ್ ನಿಲ್ದಾಣಬಳಿ ನಡೆದಿದೆ.
ಮಂಜುನಾಥ್ ಹಲಸುಲಿಗೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯರಾಗಿದ್ದು, ಈತನ ಮೇಲೆ ಬಜರಂಗದಳದ ಕಾರ್ಯಕರ್ತ ದೀಪು ಹಾಗೂ ಇತರರು ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಹಲ್ಲೆಗೆ ಒಳಗಾದ ಮಂಜುನಾಥ್ ಸಕಲೇಶಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಜರಂಗದಳದ ಕಾರ್ಯಕರ್ತರು ಈತನ ಅಣ್ಣನ ಮಗ ಕಾವೇಶ್ ಮೇಲೆಯೂ ಹಲ್ಲೆಗೆ ಮುಂದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ವಾಹನದಲ್ಲಿ ಕಾನೂನಾತ್ಮಕವಾಗಿ ಕರು ಸಾಗಿಸುತ್ತಿದ್ದ ಸಂದರ್ಭದಲ್ಲಿ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತಾಲೂಕಿನ ವಿವಿಧ ದಲಿತ ಸಂಘಟನೆಯ ಪ್ರಮುಖರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಬೈಕೆರೆ ದೇವರಾಜ್, ಬಜರಂಗದಳದ ಕಾರ್ಯಕರ್ತರು ದಿನೇದಿನೇ ತಾಲೂಕಿನಲ್ಲಿ ಅಟ್ಟಹಾಸವನ್ನು ಮೆರೆಯುತ್ತಿದ್ದಾರೆ ಎಂದು ದೂರಿದರು.
'ದಲಿತರು ಮೌನವಾಗಿದ್ದಾರೆ ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ ಎಂದು ತಿಳಿದಿದ್ದರೆ ಅದು ತಪ್ಪು ದಲಿತರು ಬೀದಿಗಿಳಿದರೆ ಇದರ ಪರಿಣಾಮ
ಏನಾಗುತ್ತದೆ ಎಂಬುದನ್ನು ಈ ಬಜರಂಗದಳದ ಕಾರ್ಯಕರ್ತರು ಅರ್ಥಮಾಡಿಕೊಳ್ಳಬೇಕು' ಎಂದು ಎಚ್ಚರಿಸಿದ್ದಾರೆ.
ವಕೀಲ ವೇಣು ಕುಮಾರ್ ಮಾತನಾಡಿ, 'ತಾಲೂಕಿನ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿರುವವರು ಬಜರಂಗದಳದ ಕೃತ್ಯಗಳನ್ನು ನಾವು ಖಂಡಿಸುತ್ತೇವೆ, ನೈತಿಕ ಪೊಲೀಸ್ ಗಿರಿ ನಡೆಸಲು ಸರಕಾರ ಇವರಿಗೆ ಯಾವ ಹಕ್ಕು ನೀಡಿದೆ. ಪೊಲೀಸರು ಇವರನ್ನು ಈ ಕೂಡಲೇ ಬಂಧಿಸಿ ಉಗ್ರ ಕ್ರಮ ಕೈಗೊಳ್ಳಬೇಕು. ನಾವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಗಳು ಶಾಂತಿಗೆ ಭಂಗ ತರುವುದು ನಾವು ಇಷ್ಟಪಡುವುದಿಲ್ಲ ಆದರೆ ಸ್ವಾಭಿಮಾನಕ್ಕೆ ದಕ್ಕೆಯಾದರೆ ನಾವು ಸುಮ್ಮನಿರುವುದಿಲ್ಲ' ಎಂದರು.
ಪ್ರತಿಭಟನೆ ಯಲ್ಲಿ ಹೆನ್ನಲಿ ಶಾಂತರಾಜ್, ಅಣ್ಣಪ್ಪ ಪುರಸಭೆ ಸದಸ್ಯ, ಮಂಜು, ಬನ್ನಾರಿ, ಮುಂತಾದವರು ಇದ್ದರು.
ಇದನ್ನೂ ಓದಿ: ಮಡಿಕೇರಿ | ಧರ್ಮಗುರುವಿನ ಮೇಲೆ ಹಲ್ಲೆ ಆರೋಪ: ಎಸ್ಪಿಗೆ ದೂರು







