ನಾವು ಕಟ್ಟಿ ಬೆಳೆಸಿದ್ದನ್ನೆಲ್ಲ ಬಿಜೆಪಿಯರು ಮಾರುತ್ತಿದ್ದಾರೆ: ಡಿ.ಕೆ.ಶಿವಕುಮಾರ್ ವಾಗ್ದಾಳಿ

ಬೆಂಗಳೂರು, ಆ.20: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆಹರೂ ಫೋಟೋ ತೆಗೆದು ಹಾಕಿ ದೊಡ್ಡ ಸಾಧನೆ ಮಾಡಿರುವುದಾಗಿ ಬಿಜೆಪಿಯವರಿಂದ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಈ ದೇಶದ ಇತಿಹಾಸವನ್ನು ನಿಮ್ಮ ಪಕ್ಷದವರಿಂದ ಬದಲಿಸಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಶನಿವಾರ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾಗಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನೆಹರೂ, ಇಂದಿರಾ ಗಾಂಧಿ ಜೈಲು ವಾಸ ಅನುಭವಿಸಿದರು. ಈ ದೇಶದ ಐಕ್ಯತೆ, ಸಮಗ್ರತೆ ಶಾಂತಿಗಾಗಿ ಇಂದಿರಾ ಗಾಂಧಿ 33 ಗುಂಡುಗಳನ್ನು ತಿಂದು ಪ್ರಾಣ ತ್ಯಾಗ ಮಾಡಿದರು. ನಂತರ ಪ್ರಧಾನಿಯಾದ ರಾಜೀವ್ ಗಾಂಧಿ ಕೂಡ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು ಎಂದು ಅವರು ಹೇಳಿದರು.
ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ನಾಯಕರು ಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕರನ್ನು ತಯಾರು ಮಾಡಲು ರಾಜೀವ್ ಗಾಂಧಿ ಸಂವಿಧಾನಕ್ಕೆ ತಿದ್ದುಪಡಿ ತಂದರು. ನಾಯಕರನ್ನು ಸೃಷ್ಟಿಸುವವನು ನಿಜವಾದ ನಾಯಕನೇ ಹೊರತು, ಹಿಂಬಾಲಕರನ್ನು ಸೃಷ್ಟಿಸುವವರಲ್ಲ ಎಂದು ರಾಜೀವ್ ಗಾಂಧಿ ಹೇಳಿದ್ದರು ಎಂದು ಶಿವಕುಮಾರ್ ಸ್ಮರಿಸಿದರು.
ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ನೀಡುವ ಚರ್ಚೆ ಆರಂಭವಾಗಿದೆ. ಈಗಾಗಲೇ ಸೋನಿಯಾ ಗಾಂಧಿ ಶೇ.33 ರಷ್ಟು ಮೀಸಲಾತಿ ನಿರ್ಣಯ ತಂದಿದ್ದು, ಬಿಜೆಪಿಯವರು ಈ ವಿಚಾರವನ್ನು ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ. ಹೀಗಾಗಿ ಮೀಸಲಾತಿ ತರಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಮಹಿಳೆಯರಲ್ಲಿ ನಾಯಕತ್ವ ಗುಣ ಬೆಳೆಸುವ ಕೆಲಸ ಆಗಬೇಕು ಎಂದು ಅವರು ಹೇಳಿದರು.
ಇಂದು ನಾವು ಫೋನ್ ಹಾಗೂ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮವನ್ನು 2.73 ಕೋಟಿ ಜನ ಮೊಬೈಲ್‍ನಲ್ಲಿ ನೋಡಿದ್ದಾರೆ. ಇದು ಸಾಧ್ಯವಾಗಿದ್ದು ಹೇಗೆ? ರಾಜೀವ್ ಗಾಂಧಿ ಅವರ ಟೆಲಿಕಾಂ ಕ್ರಾಂತಿಯಿಂದ ಎಂದು ಶಿವಕುಮಾರ್ ಹೇಳಿದರು.
ಭೂ ಸುಧಾರಣಾ ಕಾಯ್ದೆ ಆಧರಿಸಿ ಇಂದಿರಾ ಗಾಂಧಿ ದೇಶದಲ್ಲಿ ಬಡವರಿಗೆ ಭೂಮಿ ಹಂಚಲು ನಿರ್ಧರಿಸಿದರು. ಆಗ ರಾಜ್ಯದಲ್ಲಿ 8 ಲಕ್ಷ ಜನರಿಗೆ ಭೂಮಿ ಹಂಚಲಾಯಿತು. ಬ್ಯಾಂಕ್‍ಗಳ ರಾಷ್ಟ್ರೀಕರಣ ಮಾಡುವ ಮೂಲಕ ದೇಶದ ಆರ್ಥಿಕತೆಗೆ ಉತ್ತೇಜನ ತುಂಬಿದರು. ಇಂದು ದೊಡ್ಡ ಉದ್ದಿಮೆದಾರರಿಗೆ ಕೋಟ್ಯಂತರ ರೂಪಾಯಿಯಿಂದ ರೈತರವರೆಗೂ ಎಲ್ಲರಿಗೂ ಸಾಲಸೌಲಭ್ಯ ಸಿಗುತ್ತಿದೆ ಎಂದರೆ ಅದಕ್ಕೆ ಕಾರಣ ಬ್ಯಾಂಕುಗಳ ರಾಷ್ಟ್ರೀಕರಣ ಎಂದು ಶಿವಕುಮಾರ್ ಹೇಳಿದರು.
ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಮಯದಲ್ಲಿ ವಿಧಾನಸೌಧದಲ್ಲಿ ಸಾರ್ಕ್ ಸಭೆ ಮಾಡಿದರು. ಆದರೆ ಇಂದು ಭಾರತ ದೇಶ ಶ್ರೀಲಂಕಾ, ಪಾಕಿಸ್ತಾನ, ಚೀನಾ, ಬಾಂಗ್ಲಾದೇಶಗಳ ನಡುವಣ ಸಂಬಂಧ ಹೇಗಿದೆ? ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಒಗ್ಗಟ್ಟಿನಿಂದ ಬದುಕುತ್ತಿದ್ದ ನೆರೆ ರಾಷ್ಟ್ರಗಳ ಬಾಂಧವ್ಯವೂ ಚೂರಾಗಿದೆ. ದೇಶದೊಳಗೆ ಸಮಾಜಗಳು ಕೂಡ ಚೂರಾಗಿವೆ ಎಂದು ಅವರು ತಿಳಿಸಿದರು.
ಬಿಬಿಎಂಪಿ ಚುನಾವಣೆ ಅವಧಿ ಮುಗಿದು 2 ವರ್ಷ ಆಗಿದೆ. ಬಿಜೆಪಿಯವರಿಗೆ ಗೆಲ್ಲುವ ವಿಶ್ವಾಸ ಇದ್ದಿದ್ದರೆ ಅವರು ಚುನಾವಣೆ ಮಾಡುತ್ತಿದ್ದರು. ಈಗ ತರಾತುರಿಯಲ್ಲಿ ಮೀಸಲಾತಿ ಮಾಡಿಕೊಂಡಿದ್ದಾರೆ. ಡಬಲ್ ಇಂಜಿನ್ ಸರಕಾರ, ಉತ್ತಮ ಆಡಳಿತ, ಯೋಜನೆ ನೀಡಿದ್ದರೆ ಚುನಾವಣೆ ಮಾಡಬೇಕಿತ್ತು ಎಂದು ಶಿವಕುಮಾರ್ ಹೇಳಿದರು.
ಯುವಕರ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿದೆ. ಸರಕಾರಿ ಶಾಲೆಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ನಾವು ಕಟ್ಟಿ ಬೆಳೆಸಿದ್ದನ್ನು ಅವರು ಮಾರುತ್ತಿದ್ದಾರೆ. ಇಂತಹ ಅನೇಕ ಆಸ್ತಿಗಳನ್ನು ಕಾಂಗ್ರೆಸ್ ಕಟ್ಟಿದೆ. ಬಿಜೆಪಿ ಸರಕಾರ ಇಂತಹ ಆಸ್ತಿಗಳನ್ನು ನಿರ್ಮಿಸುವ ಬದಲು ಮಾರಾಟ ಮಾಡಲು ಹೊರಟಿದೆ. ಬಿಜೆಪಿ ಬಂದ ನಂತರ ವಿಮಾನ, ರೈಲು, ಬಂದರು, ಬಿಎಚ್‍ಎಲ್, ಬ್ಯಾಂಕುಗಳು, ಬಿಇಎಲ್ ಎಲ್ಲವನ್ನು ಮಾರಾಟ ಮಾಡುತ್ತಿದ್ದಾರೆ. ಇದು ನಿಮ್ಮ ನೀತಿಯೇ? ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯವರು ದೇಶವನ್ನು ಇಬ್ಭಾಗ ಮಾಡುತ್ತಿದ್ದು, ರಾಹುಲ್ ಗಾಂಧಿ ಭಾರತ್ ಜೋಡೋ ಕಾರ್ಯಕ್ರಮದ ಮೂಲಕ ದೇಶವನ್ನು ಒಗ್ಗೂಡಿಸಲು ಮುಂದಾಗಿದ್ದಾರೆ. ಈ ಕಾರ್ಯಕ್ರಮದ ಭಾಗವಾಗಿ ಅವರು ರಾಜ್ಯದಲ್ಲಿ 21 ದಿನಗಳ ಕಾಲ ಪಾದಯಾತ್ರೆ ಮಾಡಲಿದ್ದು, ಒಂದೊಂದು ಜಿಲ್ಲೆಗೆ ಒಂದೊಂದು ದಿನ ನಿಗದಿ ಮಾಡಲಿದ್ದು, ಆ ಜಿಲ್ಲೆಯವರು ರಾಹುಲ್ ಗಾಂಧಿ ಅವರ ಜತೆ ಹೆಜ್ಜೆ ಹಾಕಬೇಕು ಎಂದು ಶಿವಕುಮಾರ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎಐಸಿಸಿ ವಕ್ತಾರ ಪವನ್ ಖೇರಾ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಮಾಜಿ ಸಚಿವ ಎಚ್.ಎಂ.ರೇವಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







