ಸಿಎಂ ಬೊಮ್ಮಾಯಿ ಕಾರ್ಯಕ್ರಮದಲ್ಲಿ ಕಪ್ಪುಬಟ್ಟೆ ಪ್ರದರ್ಶಿಸುತ್ತೇವೆ: BJP ಶಾಸಕ ನೆಹರು ಓಲೇಕಾರ್

ಹಾವೇರಿ: ಆ.21ರಂದು (ರವಿವಾರ) ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಹಾವೇರಿ ಹಾಗೂ ಧಾರವಾಡ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ಸಿಎಂ ಭಾಗವಹಿಸಲಿರುವ ಕಾರ್ಯಕ್ರಮಗಳಲ್ಲಿ ಸ್ವತಃ ಬಿಜೆಪಿ (BJP) ಶಾಸಕ ನೆಹರು ಓಲೇಕಾರ್ ಅವರೇ ಕಪ್ಪು ಬಟ್ಟೆ ಪ್ರದರ್ಶನ ಮಾಡಲು ಮುಂದಾಗಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರು ರವಿವಾರ ಬೆಳಗ್ಗೆ ಬೆಂಗಳೂರಿನ ಎಚ್.ಎ.ಎಲ್. ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಶಿಗ್ಗಾಂವ ತೆರಳಲಿರುವ ಸಿಎಂ, ಶಿಗ್ಗಾಂವಿ ಮತ್ತು ಸವಣೂರಿನಲ್ಲಿ ವಕೀಲರ ಸಂಘಗಳ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದು, ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಶಾಸಕ ನೆಹರು ಓಲೇಕಾರ್ ಅವರ ಹೆಸರನ್ನು ಕೈ ಬಿಡಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಕಾಂಗ್ರೆಸಿಗರಿಂದ ಪ್ರತಿದಾಳಿ ಆತಂಕ: ಶಾಸಕರ ಭವನದಲ್ಲಿ ಮೊಟ್ಟೆ ನಿರ್ಬಂಧ
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಓಲೇಕಾರ್, 'ವಕೀಲರ ಸಂಘದ ಕಚೇರಿಗೆ ₹7.5 ಕೋಟಿ ಅನುದಾನ ಮಂಜೂರು ಮಾಡಿಸಿದ್ದೆ. ಇದೀಗ ನನ್ನನ್ನು ಕಡೆಗಣಿಸಿ ಸಮಾರಂಭ ಏರ್ಪಡಿಸಿರುವುದು ಅಕ್ಷಮ್ಯ ಅಪರಾಧ. ಕಾರ್ಯಕ್ರಮದ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶನ ಮಾಡುವ ಮೂಲಕ ಕಾರ್ಯಕರ್ತರು ವಿಷಾದ ವ್ಯಕ್ತಪಡಿಸಲಿದ್ದಾರೆ' ಎಂದು ತಿಳಿಸಿದರು.
ವಾರ್ತಾಭಾರತಿಯ ನ್ಯೂಸ್ ಅಪ್ಡೇಟ್ಸ್ ನಿಮ್ಮ ವಾಟ್ಸ್ ಆಪ್ ಗೆ ತಲುಪಬೇಕೇ ? ಈ ಲಿಂಕ್ https://bit.ly/3Cd3adz ಕ್ಲಿಕ್ ಮಾಡಿ ನಮ್ಮ ಗ್ರೂಪ್ Join ಆಗಿ.







