ಗ್ಯಾಂಗ್ ರೇಪ್ ಅಪರಾಧಿಗಳ ಬಿಡುಗಡೆ ನಾಚಿಕೆಗೇಡು: ದಾರಿಮಿ ಉಲಮಾ ಒಕ್ಕೂಟ

ಮಂಗಳೂರು: ದೇಶವನ್ನೇ ತಲ್ಲಣಗೊಳಿಸಿದ್ದ ಗುಜರಾತ್ ಗಲಭೆಯ ಸಂದರ್ಭ ನಡೆದಿದ್ದ ಬಲ್ಕಿಸ್ ಬಾನು ಮೇಲಿನ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸಿದ ಗುಜರಾತ್ ಸರಕಾರದ ಕ್ರಮ ಮತ್ತು ಸಂಘಪರಿವಾರವು ಅಪರಾಧಿಗಳನ್ನು ಹೂಹಾರ ಹಾಕಿ ಸ್ವಾಗತಿಸಿರುವುದು ನಾಚಿಗೆಗೇಡಿನ ಸಂಗತಿಯಾಗಿದೆ ಎಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಅಭಿಪ್ರಾಯಪಟ್ಟಿದೆ.
ನಗರದ ಖಾಸಗಿ ರೆಸಿಡೆನ್ಸಿಯಲ್ಲಿ ಶನಿವಾರ ನಡೆದ ಒಕ್ಕೂಟದ ಪದಾಧಿಕಾರಿಗಳ ಸಭೆಯಲ್ಲಿ ಈ ಕೃತ್ಯವನ್ನು ಕಟುವಾಗಿ ಖಂಡಿಸಲಾಯಿತು.
ಭಾರತ ದೇಶ ಯಾವ ಕಡೆ ಸಾಗುತ್ತಿದರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಈ ಬೆಳವಣಿಗೆಯು ದೇಶವನ್ನು ನೈತಿಕ ಅಧಃಪತನದತ್ತ ಕೊಂಡೋಯ್ಯಲು ಮಾತ್ರ ಸಹಕಾರಿಯಾಗುತ್ತದೆ ಎಂದು ತಿಳಿಸಿದೆ.
ಸರಕಾರವು ಸಂತ್ರಸ್ತೆ ಬಲ್ಕಿಸ್ ಬಾನುರ ಹಕ್ಕನ್ನು ಕಸಿದುಕೊಂಡು ಅನ್ಯಾಯ ಎಸಗಿದೆ. ಸಂಸದೀಯ ಮಂಡಳಿಯು ಸೂಕ್ತ ಕ್ರಮಗಳನ್ನು ಕೈಗೊಂಡು ಅಪರಾಧಿಗಳನ್ನು ಮತ್ತೆ ಜೈಲಿಗೆ ಕಳುಹಿಸಬೇಕು ಎಂದು ಕೇಂದ್ರ ಸರಕಾರವವನ್ನು ಒತ್ತಾಯಿಸಿದೆ.
ಧರ್ಮಗುರು ಮೇಲೆ ಹಲ್ಲೆಗೆ ಖಂಡನೆ
ಕೊಡಗಿನ ಧರ್ಮಗುರು ಹಾರಿಸ್ ಮುಸ್ಲಿಮಾರ್ ತನ್ನ ಪತ್ನಿ, ಮಕ್ಕಳ ಜೊತೆ ವಿರಾಜಪೇಟೆಯಿಂದ ಕಬಡಕ್ಕೇರಿ ಮಸೀದಿಗೆ ತೆರಳುವಾಗ ಕಾಕೋಟುಪರಂಬು ಮೈತಾಡಿ ಜಂಕ್ಷನ್‌ನಲ್ಲಿ ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿ ಕಾರನ್ನು ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವಮಾನಿಸಿದ್ದಾರೆ. ಅವರ ಪತ್ನಿ, ಮಕ್ಕಳ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ. ಇದು ಖಂಡನೀಯ. ಸರಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದೆ.
ಸಭೆಯಲ್ಲಿ ಒಕ್ಕೂಟದ ಮುಖಂಡರಾದ ಎಸ್‌ಬಿ ದಾರಿಮಿ, ಯುಕೆ ದಾರಿಮಿ, ಕೆಆರ್ ದಾರಿಮಿ, ಸಿದ್ದೀಕ್ ದಾರಿಮಿ, ಹೈದರ್ ದಾರಿಮಿ ಕರಾಯ, ಕುಕ್ಕಿಲ ದಾರಿಮಿ, ತಬೂಕ್ ದಾರಿಮಿ, ಸಂಪ್ಯ ದಾರಿಮಿ, ಕಾಸಿಂ ದಾರಿಮಿ, ಕೆಎಲ್ ದಾರಿಮಿ, ಅಹ್ಮದ್ ದಾರಿಮಿ ಕಂಬಳಬೆಟ್ಡು, ಕೆಲಿಂಜ ಅಬ್ಬಾಸ್ ದಾರಿಮಿ ಪಾಲ್ಗೊಂಡಿದ್ದರು.