ಉತ್ತರ ರಾಜ್ಯಗಳಲ್ಲಿ ಮಳೆ ಅಬ್ಬರ; ಕನಿಷ್ಠ 37 ಮಂದಿ ಮೃತ್ಯು

ಹೊಸದಿಲ್ಲಿ: ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಒಡಿಶಾ ಹಾಗೂ ಜಾರ್ಖಂಡ್‍ನಲ್ಲಿ ಮುಂಗಾರು ಮಳೆ ಅನಾಹುತ ಸೃಷ್ಟಿಸಿದ್ದು, ದಿಢೀರ್ ಪ್ರವಾಹ ಹಾಗೂ ಭೂಕುಸಿತದಿಂದ ಶನಿವಾರ ಕನಿಷ್ಠ 37 ಮಂದಿ ಮೃತಪಟ್ಟಿದ್ದಾರೆ.
ಸಾವಿರಾರು ಮಂದಿ ನಿರ್ಗತಿಕರಾಗಿದ್ದು, ನೆರೆ ಹಾಗೂ ಭೂಕುಸಿತದಿಂದಾಗಿ ಹಲವು ಮನೆಗಳು ಧ್ವಂಸವಾಗಿದ್ದು, ಬೆಟ್ಟ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಕಡಿದು ಹೋಗಿದೆ. ಪೂರ್ವ ಭಾರತದ ಹಲವು ಕಡೆಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ.
ಹಿಮಾಚಲ ಪ್ರದೇಶದಲ್ಲಿ ಗರಿಷ್ಠ ಅಂದರೆ 21 ಸಾವು ಸಂಭವಿಸಿದೆ. 12 ಮಂದಿ ಗಾಯಗೊಂಡಿದ್ದು, ಆರು ಮಂದಿ ನಾಪತ್ತೆಯಾಗಿದ್ದಾರೆ. ಇದರಿಂದಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಭೀತಿ ಇದೆ. ಉತ್ತರಾಖಂಡ ಹಾಗೂ ಜಾರ್ಖಂಡ್‍ನಲ್ಲಿ ತಲಾ ನಾಲ್ಕು ಸಾವು ಸಂಭವಿಸಿದ್ದು, ಒಡಿಶಾದಲ್ಲಿ ಆರು ಮಂದಿ ಹಾಗೂ ಜಮ್ಮುವಿನಲ್ಲಿ ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ.
ಹಿಮಾಚಲದ ಕಾಂಗ್ರಾ ಜಿಲ್ಲೆಯಲ್ಲಿ ಪಠಾಣ್‍ಕೋಟ್- ಜೋಗಿಂದರ್ ನಗರ ರೈಲು ಮಾರ್ಗದಲ್ಲಿ ಬ್ರಿಟಿಷ್ ಕಾಲದ ಚಕ್ಕಿ ಸೇತುವೆ ಸೇರಿದಂತೆ ಹಲವು ಸೇತುವೆಗಳು ಪ್ರವಾಹ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಚಂಡೀಗಢ- ಮನಾಲಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ರಸ್ತೆಗಳು ಮುಚ್ಚಿವೆ.
ಉತ್ತರಾಖಂಡದಲ್ಲಿ ಒಟ್ಟು 235 ರಸ್ತೆಗಳು ಭೂಕುಸಿತದಿಂದಾಗಿ ಮುಚ್ಚಿವೆ ಎಂದು ಉತ್ತರಾಖಂಡ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಪ್ರಕಟಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ ಮಣ್ಣಿನ ಮನೆ ಕುಸಿದು ಇಬ್ಬರು ಮಕ್ಕಳು ಜೀವಂತ ಸಮಾಧಿಯಾಗಿದ್ದಾರೆ. ಭೀಕರ ಪ್ರವಾಹ ಮತ್ತು ಭಾರಿ ಮಳೆಯಿಂದಾಗಿ ಮುಚ್ಚಿದ್ದ ವೈಷ್ಣೋದೇವಿ ಯಾತ್ರೆಯನ್ನು ಶನಿವಾರ ಪುನಾರಂಭಿಸಲಾಗಿದೆ.
ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ವಾಯುಭಾರ ಕುಸಿತ ಸಂಭವಿಸಿದ ಕಾರಣದಿಂದ ಜಾರ್ಖಂಡ್‍ನ ಆಗ್ನೇಯ ಭಾಗದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಕ್ರಮೇಣ ಬಿರುಗಾಳಿ ಛತ್ತೀಸ್‍ಗಢ, ಉತ್ತರ ಒಡಿಶಾ ಮತ್ತು ಪೂರ್ವ ಮಧ್ಯಪ್ರದೇಶದತ್ತ ಬೀಸಲಿದೆ. ಮುಂದಿನ 24 ಗಂಟೆಗಳಲ್ಲಿ ವಾಯವ್ಯ ಜಾರ್ಖಂಡ್, ಉತ್ತರ ಛತ್ತೀಸ್‍ಗಢ ಮತ್ತು ಉತ್ತರ ಮಧ್ಯಪ್ರದೇಶದತ್ತ ಬಿರುಗಾಳಿ ಮುಖ ಮಾಡಲಿದ್ದು, ಕ್ರಮೇಣ ದುರ್ಬಲವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ ಎಂದು timesofindia.com ವರದಿ ಮಾಡಿದೆ.







