ಜಿಂಬಾಬ್ವೆ ವಿರುದ್ಧ ಕ್ರಿಕೆಟ್ ಪಂದ್ಯ; ವಿಶಿಷ್ಟ ವಿಶ್ವದಾಖಲೆ ಸ್ಥಾಪಿಸಿದ ಭಾರತದ ದೀಪಕ್ ಹೂಡಾ

(ಫೈಲ್ ಫೋಟೊ: ದೀಪಕ್ ಹೂಡಾ)
ಹರಾರೆ: ಅತಿಥೇಯ ಜಿಂಬಾಬ್ವೆ ವಿರುದ್ಧ ಶನಿವಾರ ನಡೆದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ 5 ವಿಕೆಟ್ಗಳ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಆಲ್ರೌಂಡರ್ ದೀಪಕ್ ಹೂಡಾ ವಿಶಿಷ್ಟ ವಿಶ್ವದಾಖಲೆಯೊಂದನ್ನು ಬರೆದಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ಗೆ ಹೂಡಾ ಪದಾರ್ಪಣೆ ಮಾಡಿದಾಗಿನಿಂದ ಭಾರತ ಎಲ್ಲ ಪಂದ್ಯಗಳನ್ನು ಗೆದ್ದುಕೊಂಡಿದೆ. ವಿವಿಧ ಬಗೆಯ ಕ್ರಿಕೆಟ್ ಪಂದ್ಯಗಳಲ್ಲಿ ಭಾರತದ ಸತತ ಹದಿನಾರು ಗೆಲುವಿನಲ್ಲಿ ಹೂಡಾ ಕೊಡುಗೆ ಇದೆ. ಇದು ಯಾವುದೇ ತಂಡದಲ್ಲಿ ಆಟಗಾರನೊಬ್ಬ ಪದಾರ್ಪಣೆ ಮಾಡಿದ ಬಳಿಕ ಸುಧೀರ್ಘ ಜಯದ ಸರಣಿಯಾಗಿದೆ. ಈ ವರ್ಷ ಫೆಬ್ರವರಿಯಲ್ಲಿ ಹೂಡಾ ಪದಾರ್ಪಣೆ ಮಾಡಿದ ಬಳಿಕ ಭಾರತ ಏಳು ಏಕದಿನ ಪಂದ್ಯ ಹಾಗೂ ಒಂಬತ್ತು ಟಿ-20 ಪಂದ್ಯಗಳನ್ನು ಗೆದ್ದಿದೆ.
ಇದಕ್ಕೂ ಮುನ್ನ ರೊಮಾನಿಯಾದ ಸಾತ್ವಿಕ್ ನಡಿಗೋಟ್ಲಾ ಪದಾರ್ಪಣೆ ಮಾಡಿದಾಗಿನಿಂದ ಸತತ 15 ಪಂದ್ಯಗಳನ್ನು ತಂಡ ಗೆದ್ದಿತ್ತು. ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್ಮನ್ ಡೇವಿಡ್ ಮುಲ್ಲರ್ ಹಾಗೂ ರೊಮಾನಿಯಾದ ಶಂತನು ವಸಿಷ್ಟ ಅವರು ತಾವು ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಬಳಿಕ ಸತತ 13 ಗೆಲುವುಗಳ ಸರಣಿಯ ದಾಖಲೆ ಹೊಂದಿದ್ದರು.
ಶನಿವಾರ ನಡೆದ ಪಂದ್ಯದಲ್ಲಿ ಹೂಡಾ ಒಂದು ವಿಕೆಟ್ ಪಡೆಯುವ ಜತೆಗೆ 25 ರನ್ಗಳ ಕೊಡುಗೆ ನೀಡಿದ್ದರು. 162 ರನ್ಗಳ ಗೆಲುವಿನ ಗುರಿಯನ್ನು ಭಾರತ ಇನ್ನೂ 25 ಓವರ್ಗಳು ಬಾಕಿ ಇರುವಂತೆಯೇ ದಾಟಿತ್ತು. ಟಾಸ್ ಗೆದ್ದ ಭಾರತ ಜಿಂಬಾಬ್ವೆಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಜಿಂಬಾಬ್ವೆ 38.1 ಓವರ್ಗಳಲ್ಲಿ ಕೇವಲ 161 ರನ್ಗಳಿಗೆ ಆಲೌಟ್ ಆಯಿತು. ಜಿಂಬಾನ್ವೆ ತಂಡವನ್ನು ಭಾರತ ಆಲೌಟ್ ಮಾಡುತ್ತಿರುವುದು ಇದು ಸತತ ಏಳನೇ ಬಾರಿ.
ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಮೂರು ವಿಕೆಟ್ಗಳ ಮೂಲಕ ಗಮನ ಸೆಳೆದರೆ, ಹೂಡಾ, ಮೊಹ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ತಲಾ ಒಂದು ವಿಕಟ್ ಪಡೆದರು. ಭಾರತದ ಪರವಾಗಿ ಇನಿಂಗ್ಸ್ ಆರಂಭಿಸಲು ಅವಕಾಶ ಪಡೆದ ಕೆ.ಎಲ್.ರಾಹುಲ್ ಐದು ಎಸೆತಗಳಲ್ಲಿ ಕೇವಲ ಒಂದು ರನ್ ಗಳಿಸಿ ನಿರಾಸೆ ಮೂಡಿಸಿದರು.
ಸಂಜು ಸ್ಯಾಮ್ಸನ್ ಅಜೇಯ 43 ಮತ್ತು ಶಿಖರ್ ದವನ್ ಹಾಗೂ ಶುಭ್ಮನ್ ಗಿಲ್ ತಲಾ 33 ರನ್ ಗಳಿಸಿ ಸುಲಭ ಜಯಕ್ಕೆ ಕಾರಣರಾದರು. ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಭಾರತ ಮೂರು ಪಂದ್ಯಗಳ ಸರಣಿಯನ್ನು ಗೆದ್ದುಕೊಂಡಿದೆ.