ಮನೀಶ್ ಸಿಸೋಡಿಯಾಗೆ ಲುಕ್ ಔಟ್ ನೋಟಿಸ್, ವಿದೇಶ ಪ್ರವಾಸಕ್ಕೆ ನಿರ್ಬಂಧ

Photo:PTI
ಹೊಸದಿಲ್ಲಿ: ಮದ್ಯಪಾನ ನೀತಿ ಉಲ್ಲಂಘನೆ ಕುರಿತು ಸಿಬಿಐ ಸಲ್ಲಿಸಿರುವ ಪ್ರಥಮ ಮಾಹಿತಿ ವರದಿಯಲ್ಲಿ ದಿಲ್ಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Delhi's Deputy Chief Minister Manish Sisodia)ಹಾಗೂ ಇತರ 12 ಜನರ ವಿರುದ್ಧ ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿದ್ದು, ವಿದೇಶ ಪ್ರವಾಸಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮದ್ಯ ನೀತಿಯಲ್ಲಿನ( liquor policy ) ಭ್ರಷ್ಟಾಚಾರದ ಆರೋಪದ ಮೇಲೆ ಶುಕ್ರವಾರ ಅಬಕಾರಿ ಇಲಾಖೆಯನ್ನು ನಿರ್ವಹಿಸುತ್ತಿರುವ ಮನೀಶ್ ಸಿಸೋಡಿಯಾ ಅವರ ನಿವಾಸ ಹಾಗೂ ಏಳು ರಾಜ್ಯಗಳ 31 ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸಿತ್ತು.
ಸಿಬಿಐನ ಎಫ್ಐಆರ್ನಲ್ಲಿ ಹೆಸರಿಸಲಾದ 15 ಆರೋಪಿಗಳ ಪಟ್ಟಿಯಲ್ಲಿ ಸಿಸೋಡಿಯಾ ಮೊದಲ ಸ್ಥಾನದಲ್ಲಿದ್ದಾರೆ. 11 ಪುಟಗಳ ದಾಖಲೆಯಲ್ಲಿ ಪಟ್ಟಿ ಮಾಡಲಾದ ಅಪರಾಧಗಳೆಂದರೆ ಭ್ರಷ್ಟಾಚಾರ, ಕ್ರಿಮಿನಲ್ ಪಿತೂರಿ ಹಾಗೂ ಸುಳ್ಳು ಖಾತೆಗಳ ಸೃಷ್ಟಿ.
ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಮಾಡುತ್ತಿರುವ ಕೆಲಸ ಜಾಗತಿಕ ಮಟ್ಟದಲ್ಲಿ ಚರ್ಚೆ ಆಗುತ್ತಿರುವುದರಿಂದ ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿರುವ ಬಿಜೆಪಿ ಆಡಳಿತದ ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿಸೋಡಿಯಾ ತೀವ್ರ ವಾಗ್ದಾಳಿ ನಡೆಸಿದ ಮರುದಿನೇ ಲುಕ್ಔಟ್ ನೋಟಿಸ್ ಬಂದಿದೆ.







