ಮಧ್ಯಪ್ರದೇಶ: ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಮುಖಂಡನನ್ನು ಉಚ್ಚಾಟಿಸಿದ ಬಿಜೆಪಿ

ಭೋಪಾಲ,ಆ.21: ಬ್ರಾಹ್ಮಣರ ಕುರಿತು ವಿವಾದಾತ್ಮಕ ಹೇಳಿಕೆಗಳಿಗಾಗಿ ಮಧ್ಯಪ್ರದೇಶದ ಗ್ವಾಲಿಯರ್-ಚಂಬಲ್ ಪ್ರದೇಶದ ನಾಯಕ ಪ್ರೀತಂ ಸಿಂಗ್ ಲೋಧಿ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ. ರವಿವಾರ ಬೆಳಿಗ್ಗೆ ಲೋಧಿಯವರನ್ನು ಭೋಪಾಲದಲ್ಲಿಯ ಬಿಜೆಪಿ ಕೇಂದ್ರ ಕಚೇರಿಗೆ ಕರೆಸಿಕೊಂಡ ಪಕ್ಷದ ನಾಯಕತ್ವವು ಅವರ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಿತು.
ಬುಧವಾರ ವೀರರಾಣಿ ಅವಂತಿಬಾಯಿ ಲೋಧಿಯವರ ಜನ್ಮದಿನದ ಅಂಗವಾಗಿ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದ ಲೋಧಿ ಬ್ರಾಹ್ಮಣರನ್ನು ಟೀಕಿಸಿದ್ದರು ಮತ್ತು ಅವರು ಧರ್ಮದ ಹೆಸರಿನಲ್ಲಿ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಮತ್ತು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಅವರ ವಿವಾದಾತ್ಮಕ ಹೇಳಿಕೆಗಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.
ಲೋಧಿ ವಿರುದ್ಧ ಪೊಲೀಸ್ ದೂರನ್ನು ದಾಖಲಿಸಿದ್ದ ಬಿಜೆಪಿ ಯುವಮೋರ್ಚಾ ನಾಯಕ ಪ್ರವೀಣ ಮಿಶ್ರಾ,ಲೋಧಿ ಜನರ ನಡುವೆ ದ್ವೇಷವನ್ನು ಹುಟ್ಟುಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು. ಲೋಧಿ (62) ಈಗಾಗಲೇ ನಾಲ್ಕು ಕೊಲೆ ಯತ್ನ ಮತ್ತು ಎರಡು ಕೊಲೆ ಪ್ರಕರಣಗಳು ಸೇರಿದಂತೆ 37 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಉಮಾ ಭಾರತಿಯವರಿಗೆ ನಿಕಟರಾಗಿರುವ ಲೋಧಿ 2013 ಮತ್ತು 2018ರ ವಿಧಾನಸಭಾ ಚುನಾವಣೆಗಳಲ್ಲಿ ಪಿಚೋರ (ಶಿವಪುರಿ) ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಆರು ಬಾರಿಯ ಶಾಸಕ ಕೆ.ಪಿ.ಸಿಂಗ್ 'ಕಕ್ಕಾಜು 'ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. 2018ರಲ್ಲಿ ಸುಮಾರು 2500 ಮತಗಳ ಅಲ್ಪಅಂತರದಿಂದ ಸೋತಿದ್ದರು. ಅವರು ಈಗಲೂ ಗ್ವಾಲಿಯರ್-ಚಂಬಲ್ ಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಪ್ರಭಾವಿಯಾಗಿದ್ದಾರೆ.
ಬುಧವಾರ ಶಿವಪುರಿಯ ಖರೈಹ್ ಗ್ರಾಮದಲ್ಲಿ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ್ದ ಸಂದರ್ಭ ಲೋಧಿ,ಬ್ರಾಹ್ಮಣರು ಜನರ ಹಣ ಮತ್ತು ಸಂಪನ್ಮೂಲಗಳಿಂದ ಏಳಿಗೆ ಹೊಂದುತ್ತಿದ್ದರು. ಒಳ್ಳೆಯ ಕುಟುಂಬಗಳ ಸುಂದರ ಸ್ತ್ರೀಯರನ್ನು ನೋಡಿದಾಗ ಈ ಬ್ರಾಹ್ಮಣರು ಅವರ ಮನೆಗಳಲ್ಲಿ ಊಟ ಮಾಡಲು ಬಯಸುತ್ತಾರೆ. ಕಾರ್ಯಕ್ರಮಗಳಲ್ಲಿ ಯುವತಿಯರು ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಬೇಕು ಎಂದು ಬಯಸುವ ಅವರು ಹಿರಿಯ ಮಹಿಳೆಯರು ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳುವಂತೆ ಮಾಡುತ್ತಾರೆ ಎಂದು ಹೇಳಿದ್ದರು.
ಉತ್ತರ ಪ್ರದೇಶದಲ್ಲಿ ಕಳೆದುಕೊಂಡಿರುವ ಬ್ರಾಹ್ಮಣರ ಬೆಂಬಲವನ್ನು ಮರಳಿ ಪಡೆಯಲು ಈಗಲೂ ಪ್ರಯತ್ನಿಸುತ್ತಿರುವ ಬಿಜೆಪಿಗೆ ಲೋಧಿ ಹೇಳಿಕೆಗಳು ಆಘಾತವನ್ನುಂಟು ಮಾಡಿವೆ.ಲೋಧಿ ನಿರ್ದಿಷ್ಟ ಸಮುದಾಯದ ವಿರುದ್ಧ ಕೆಲವು ಹೇಳಿಕೆಗಳನ್ನು ನೀಡಿದ್ದು,ಅವು ಪಕ್ಷದ ದೃಷ್ಟಿಕೋನಕ್ಕೆ ವಿರುದ್ಧವಾಗಿವೆ. ಅವರ ಅಭಿಪ್ರಾಯಗಳನ್ನು ಪಕ್ಷವು ಎಂದಿಗೂ ಒಪ್ಪುವುದಿಲ್ಲ. ಲೋಧಿಯವರನ್ನು ಪಕ್ಷದ ಕೇಂದ್ರಕಚೇರಿಗೆ ಕರೆಸಿ ನೋಟಿಸ್ ನೀಡಲಾಗಿತ್ತು. ಅವರು ಲಿಖಿತ ಕ್ಷಮಾಪಣೆಯನ್ನ್ನೂ ಸಲ್ಲಿಸಿದ್ದರು. ಆದರೆ ಅದು ಅತೃಪ್ತಿಕರವಾಗಿದ್ದರಿಂದ ಅವರ ಪ್ರಾಥಮಿಕ ಸದಸ್ಯತ್ವವನ್ನು ಆರು ವರ್ಷಗಳ ಅವಧಿಗೆ ರದ್ದುಗೊಳಿಸಲಾಗಿದೆ ಎಂದು ರಾಜ್ಯ ಬಿಜೆಪಿ ಪ್ರ.ಕಾರ್ಯದರ್ಶಿ ಭಗವಾನದಾಸ ಸಬ್ನಾನಿ ತಿಳಿಸಿದರು.ಲೋಧಿ ಹೇಳಿಕೆಯು ಬ್ರಾಹ್ಮಣರು ಮತ್ತು ಇತರ ಸಾಮಾನ್ಯ ವರ್ಗದ ಜನರ ವಿರುದ್ಧ ಬಿಜೆಪಿಯ ಸುಯೋಜಿತ ಸಂಚಿನ ಭಾಗವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.







