ಆ.22: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಪುತ್ತೂರು- ವಿಟ್ಲ ಕಾಲ್ನಡಿಗೆ ಜಾಥಾ

ವಿಟ್ಲ : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪುತ್ತೂರಿನಿಂದ ವಿಟ್ಲ ತನಕ ಪುತ್ತೂರು ಹಾಗೂ ವಿಟ್ಲ - ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಆ.22ರಂದು ಕಾಲ್ನಡಿಗೆ ಜಾಥಾ ನಡೆಯಲಿದ್ದು, ಸಂಜೆ ವಿಟ್ಲದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ವಿಟ್ಲ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ. ತಿಳಿಸಿದ್ದಾರೆ.
ನಂತರ ಮಾತನಾಡಿದ ಅವರು, ನಾಡಿಗೆ ಉತ್ತಮ ಸಂದೇಶ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಪುತ್ತೂರಿನ ದರ್ಬೆ ವೃತ್ತದಿಂದ ಆರಂಭವಾಗುವ ಕಾಲ್ನಡಿಗೆ ಜಾಥವು ಕಬಕ ಮಾರ್ಗವಾಗಿ ಅಳಕೆಮಜಲು ಕಂಬಳಬೆಟ್ಟು ಆಗಿ ಸಾಯಂಕಾಲ ವಿಟ್ಲ ತಲುಪಲಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ವಲಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯ ಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸುಮಾರು 2000 ಕ್ಕಿಂತಲೂ ಹೆಚ್ಚಿನ ಜನರು ಸೇರುವ ನಿರೀಕ್ಷೆ ಇದೆ. ಈ ಜಾಥಾವು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಮುನ್ನುಡಿಯಾಗಬೇಕು ಎನ್ನುವುದು ನಮ್ಮ ಕನಸಾಗಿದೆ. ಈ ದೇಶದಲ್ಲಿ ಸಮಾನತೆ, ಶಾಂತಿ, ಸೌಹಾರ್ದತೆಯನ್ನು ಮೂಡಿಸುವಂತಹ ಜಾಥ ಇದಾಗಿದೆ. ಸಮಾರೋಪ ಸಮಾರಂಭದಲ್ಲಿ ಕೆ.ಪಿ.ಸಿ.ಸಿ ವಕ್ತಾರ ನಿಖಿಲ್ ರಾಜ್ ಮೌರ್ಯ ಮುಖ್ಯ ಭಾಷಣ ಮಾಡಲಿದ್ದಾರೆ. ಈ ಜಾಥಾದಲ್ಲಿ ವಿವಿಧ ಜಿಲ್ಲೆ ಹಾಗೂ ರಾಜ್ಯ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ಎಸ್. ಮಹಮ್ಮದ್, ಡಿ ಸಿ.ಸಿ. ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ , ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಫಾರೂಕ್ ಮೊದಲಾದವರು ಉಪಸ್ಥಿತರಿದ್ದರು.





