'ನಾನು ಎಲ್ಲಿಗೆ ಬರಬೇಕು ಹೇಳಿ ಮೋದಿ ಜೀ': ಸಿಬಿಐ ಲುಕ್ಔಟ್ ಸುತ್ತೋಲೆಗೆ ಮನೀಶ್ ಸಿಸೋಡಿಯಾ ಆಕ್ರೋಶ

Photo:twitter
ಹೊಸದಿಲ್ಲಿ,ಆ.21: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ರವಿವಾರ ಟ್ವಿಟರ್ನಲ್ಲಿ ದಾಳಿ ನಡೆಸಿರುವ ದಿಲ್ಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು,ತಾನು ದಿಲ್ಲಿಯಲ್ಲಿ ಮುಕ್ತವಾಗಿ ತಿರುಗುತ್ತಿದ್ದರೂ ಅಬಕಾರಿ ನೀತಿಯಲ್ಲಿ ಭ್ರಷ್ಟಾಷಾರದ ಆರೋಪಗಳ ತನಿಖೆಗೆ ಸಂಬಂಧಿಸಿದಂತೆ ತನ್ನ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಲಾಗಿದೆ ಎಂದು ಆರೋಪಿಸಿದ್ದಾರೆ.
'ನಿಮ್ಮ ಎಲ್ಲ ದಾಳಿಗಳು ವಿಫಲಗೊಂಡಿವೆ,ಏನೂ ಸಿಕ್ಕಿಲ್ಲ. ಒಂದೇ ಒಂದು ಪೈಸೆಯ ಅಕ್ರಮ ಪತ್ತೆಯಾಗಿಲ್ಲ. ಈಗ ನೀವು ನನ್ನ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಿದ್ದೀರಿ. ಏನಿದು ನಾಟಕ ಮೋದಿಜಿ? ನಾನು ದಿಲ್ಲಿಯಲ್ಲಿಯೇ ಇದ್ದೇನೆ,ದಯವಿಟ್ಟು ನಾನು ಎಲ್ಲಿಗೆ ಬರಬೇಕು ಹೇಳಿ ' ಎಂದು ಸಿಸೋಡಿಯಾ ಟ್ವೀಟಿಸಿದ್ದಾರೆ.
ಆದಾಗ್ಯೂ,ಸಿಸೋಡಿಯಾರ ವಿದೇಶ ಪ್ರಯಾಣವನ್ನು ನಿರ್ಬಂಧಿಸಲು ಅವರ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಿರುವುದನ್ನು ಸಿಬಿಐ ಮೂಲಗಳು ನಿರಾಕರಿಸಿವೆ. ಈವರೆಗೆ ಪ್ರಕರಣದಲ್ಲಿಯ ಯಾವುದೇ ಆರೋಪಿಯ ವಿರುದ್ಧ ಲುಕ್ಔಟ್ ನೋಟಿಸ್ನ್ನು ಹೊರಡಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ದಿಲ್ಲಿ ಸರಕಾರದ ನೂತನ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ಸಿಬಿಐ ಶುಕ್ರವಾರ ಅಬಕಾರಿ ಸಚಿವರೂ ಆಗಿರುವ ಸಿಸೋಡಿಯಾರ ನಿವಾಸ ಮತ್ತು ಇತರ 31 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತ್ತು.
ಈ ನಡುವೆ ಬಿಜೆಪಿಯು ರವಿವಾರ ದಿಲ್ಲಿ ಮುಖ್ಯಮಂತ್ರಿಅರವಿಂದ ಕೇಜ್ರಿವಾಲ್ ಅಬಕಾರಿ ನೀತಿ 'ಹಗರಣ'ದ ಕಿಂಗ್ ಪಿನ್ ಆಗಿದ್ದಾರೆ ಎಂದು ಆರೋಪಿಸಿದೆ.
ಅಬಕಾರಿ ನೀತಿ 'ಹಗರಣ'ದ ಬೇರುಗಳು ಭ್ರಷ್ಟ ಕೇಜ್ರಿವಾಲ್ ಮನೆ ಬಾಗಿಲಿಗೆ ತಲುಪಿಸಿವೆ. ಯಾರೂ ಕಾನೂನಿಗಿಂತ ಮೇಲಲ್ಲ ಮತ್ತು ಯಾವುದೇ ಭ್ರಷ್ಟ ವ್ಯಕ್ತಿಯನ್ನು ಬಿಡುವುದಿಲ್ಲ ಎಂದು ಪಕ್ಷದ ವಕ್ತಾರ ಗೌರವ ಭಾಟಿಯಾ ಅವರು ಸುದ್ದಿಗಾರರಿಗೆ ತಿಳಿಸಿದರು.
2024ರ ಸಾರ್ವತ್ರಿಕ ಚುನಾವಣೆಯಲ್ಲಿ ಆಪ್ ಬಿಜೆಪಿಗೆ ಮುಖ್ಯ ಪ್ರತಿಸ್ಪರ್ಧಿಯಾಗಲಿದೆ ಎಂಬ ಪ್ರತಿಪಾದನೆ ಕುರಿತಂತೆ ಭಾಟಿಯಾ, ಉ.ಪ್ರದೇಶ,ಉತ್ತರಾಖಂಡ ಮತ್ತು ಗೋವಾ ಚುನಾವಣೆಗಳಲ್ಲಿ ಏನಾಯಿತು ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದರು.







