ಪುತ್ತೂರು ಉಪ ವಿಭಾಗದ ಡಿವೈಎಸ್ಪಿ ಡಾ. ಗಾನಾ ಪಿ. ಕುಮಾರ್ ವರ್ಗಾವಣೆ

ಡಾ. ಗಾನಾ ಪಿ. ಕುಮಾರ್
ಪುತ್ತೂರು: ಉಪ ವಿಭಾಗದ ಡಿವೈಎಸ್ಪಿಯಾಗಿದ್ದ ಡಾ.ಗಾನಾ ಪಿ.ಕುಮಾರ್ ಅವರನ್ನು ವರ್ಗಾವಣೆಗೊಳಿಸಿ ಕರ್ನಾಟಕ ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಆ.19ರಂದು ಆದೇಶ ಹೊರಡಿಸಿದ್ದಾರೆ. ಅವರ ಸ್ಥಾನಕ್ಕೆ ಪ್ರಸ್ತುತ ಬೆಂಗಳೂರಿನಲ್ಲಿ ಸಿಐಡಿಯಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೀರಯ್ಯ ಹಿರೇಮಠ ಅವರನ್ನು ನೇಮಕ ಮಾಡಲಾಗಿದೆ.
2020ರ ಸೆಪ್ಟಂಬರ್ ತಿಂಗಳಿನಲ್ಲಿ ಡಾ.ಗಾನಾ ಪಿ.ಕುಮಾರ್ ಅವರು ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಸುಮಾರು ಎರಡು ವರ್ಷಗಳ ಕಾಲ ಇಲ್ಲಿ ಸೇವೆ ಸಲ್ಲಿಸಿದ ಅವರನ್ನು ಸಿಐಡಿ ವಿಭಾಗಕ್ಕೆ ವರ್ಗಾವಣೆಗೊಳಿಸಲಾಗಿದೆ.
ಪುತ್ತೂರು ಉಪ ವಿಭಾಗದ ನೂತನ ಡಿವೈಎಸ್ಪಿಯಾಗಿ ನೇಮಕವಾಗಿರುವ ವೀರಯ್ಯ ಹಿರೇಮಠ ಅವರು ಪ್ರಾಯೋಗಿಕ ತರಬೇತಿ ಪೂರ್ಣಗೊಳಿಸಿ ತಿಂಗಳ ಹಿಂದೆಯಷ್ಟೆ ಸಿಐಡಿಗೆ ತಾತ್ಕಾಲಿಕವಾಗಿ ನಿಯುಕ್ತಿಗೊಂಡಿದ್ದರು. ಮಹಾ ನಿರ್ದೇಶಕರು ಮತ್ತು ಅರಕ್ಷಕ ಮಹಾನಿರೀಕ್ಷಕರ ಪರವಾಗಿ ಡಾ. ಎಂ.ಎ. ಸಲೀಂ ಐಪಿಎಸ್ ಅವರು ಈ ವರ್ಗಾವಣೆ ಆದೇಶ ಹೊರಡಿಸಿದ್ದಾರೆ.
ಡಾ. ಗಾನಾ ಪಿ.ಕುಮಾರ್ ಪುತ್ತೂರು ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ ಅವಧಿಯು ಪೊಲೀಸ್ ಇಲಾಖೆಗೆ ಬಹಳಷ್ಟು ಸವಾಲಿನಿಂದ ಕೂಡಿತ್ತು. ಕಾಲೇಜ್, ವಿದ್ಯಾಸಂಸ್ಥೆಗಳಲ್ಲಿ ನಡೆದ ವಿವಾದ ಹಾಗೂ ಹೊಡೆದಾಟಗಳು, ರಾಜಕೀಯ ಪ್ರಭಾವಗಳಿದ್ದ ಹಲವು ಹತ್ಯಾ ಪ್ರಕರಣಗಳು, ಮತೀಯ ಸಂಘರ್ಷಗಳು, ನೈತಿಕ ಪೊಲೀಸ್ ಗಿರಿ ಹಾಗೂ ಸ್ವತ: ಪೊಲೀಸ್ ಸಿಬ್ಬಂದಿಯೇ ಅತ್ಯಾಚಾರ ಪ್ರಕರಣವೊಂದರಲ್ಲಿ ಸಿಕ್ಕಿ ಹಾಕಿಕೊಂಡ ಪ್ರಕರಣಗಳು ಈ ಅವಧಿಯಲ್ಲಿ ನಡೆದಿದ್ದವು.
ನೆಲ್ಯಾಡಿಯ ಸಮೀಪ ಬೃಹತ್ ಫರ್ನಿಶಿಂಗ್ ಆಯಿಲ್ ಮಿಕ್ಸಿಂಗ್ ಅಡ್ಡೆಗೆ ದಾಳಿ ಮಾಡುವ ಮೂಲಕ ಹೆಚ್ಚು ಪ್ರಚಾರಕ್ಕೆ ಬಂದ ಗಾನಾ ಅವರು ಪ್ರಕರಣಗಳನ್ನು ನಿಭಾಯಿಸುವಾಗ ಆರಂಭದ ದಿನಗಳಲ್ಲಿ ಒಂದಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಆದರೇ ಬಳಿಕದ ದಿನಗಳಲ್ಲಿ ಖಡಕ್ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದರು.
ಈ ಮಧ್ಯೆ ಹಿಂದುತ್ವ ಸಂಘಟನೆಯೊಂದರ ಕೆಂಗಣ್ಣಿಗೂ ಗುರಿಯಾಗಿದ್ದರು. ಹಿಂದುತ್ವ ಸಂಘಟನೆಯ ಕಾರ್ಯಕರ್ತನೊಬ್ಬನ ಮೇಲೆ ರೌಡಿ ಶೀಟರ್ ತೆರೆದಿದ್ದಾರೆ ಎಂಬ ಆರೋಪ ರಾಜ್ಯ ಗೃಹ ಸಚಿವರವರೆಗೂ ತಲುಪಿತ್ತು. ಈ ಬಗ್ಗೆ ಅವರ ವಿರುದ್ಧ ಹಿಂದುತ್ವ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಲಾಗಿತ್ತು.
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ ನ ತನಿಖಾಧಿಕಾರಿಯಾಗಿದ್ದ ಗಾನಾ.ಪಿ.ಕುಮಾರ್ ಪ್ರವೀಣ್ ನೆಟ್ಟಾರು ಹತ್ಯೆಯಾದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಜವಾಬ್ದಾರಿ ಹೊತ್ತಿದ್ದರು. ಆದರೆ ಮೃತದೇಹದ ಮೆರವಣಿಗೆ ವೇಳೆ ಬೆಳ್ಳಾರೆಯಲ್ಲಿ ನಡೆದಿದ್ದ ಸಂಘರ್ಷದಲ್ಲಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹಾಗೂ ಉಸ್ತುವಾರಿ ಸಚಿವರಿಗೆ ದಿಗ್ಭಂದನ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದಾಗಿ ಬಿಜೆಪಿ ಸರ್ಕಾರ ತೀವ್ರ ಮುಜುಗರಕ್ಕೆ ಒಳಗಾಗಿತ್ತು. ಇದೇ ಕಾರಣಕ್ಕೆ ಗಾನಾ.ಪಿ.ಕುಮಾರ್ ವರ್ಗಾವಣೆಗೆ ಒತ್ತಡ ಇತ್ತು ಎನ್ನಲಾಗಿದೆ. ಇದೀಗ ಸರ್ಕಾರ ಗಾನ ಪಿ ಕುಮಾರ್ ಅವರನ್ನು ವರ್ಗಾವಣೆ ಗೊಳಿಸಿ ಆದೇಶಿಸಿದೆ.