ಪಾಂಡೇಶ್ವರ ರೊಸಾರಿಯೊ ಮೈದಾನದಲ್ಲಿ ಅಕ್ವಾ ಫೆಸ್ಟ್; ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆದ ಪೊಲೀಸ್ ಕಮಿಷನರ್ ಶಶಿಕುಮಾರ್!

ಕಮಿಷನರ್ ಶಶಿಕುಮಾರ್
ಮಂಗಳೂರು, ಆ. 21: ಮಂಗಳೂರಿನ ಪಾಂಡೇಶ್ವರ ಮೈದಾನದ ರೊಸಾರಿಯೊ ಮೈದಾನದಲ್ಲಿಯೂ ಇಂದು ಸಂಜೆ ಸ್ಥಳೀಯರು ಆಯೋಜಿಸಿದ್ದ ಅಕ್ವಾ ಫೆಸ್ಟ್ನಲ್ಲಿ ಮಂಗಳೂರು ಕಮಿಷನರ್ ಎನ್. ಶಶಿಕುಮಾರ್ ಅವರು ಭಾಗವಹಿಸಿ ಒಂದೇ ಏಟಿಗೆ ಮಡಕೆಯನ್ನು ಕೋಲಿನಿಂದ ಒಡೆಯುವ ಮೂಲಕ ಸೇರಿದ್ದ ಸ್ಥಳೀಯರನ್ನು ದಿಗ್ಭ್ರಮೆಗೊಳಿಸಿದರು.
ನಾಡಿನ ಸಂತಸ, ಸಂಭ್ರಮದ ಹಬ್ಬಗಳಲ್ಲಿ ಒಂದಾಗಿರುವ ಕೃಷ್ಣ ಜನ್ಮಾಷ್ಟಮಿಯನ್ನು ಮೊಸರು ಕುಡಿಕೆ ಉತ್ಸವದೊಂದಿಗೆ ಆಚರಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಎತ್ತರದಲ್ಲಿ ನೀರಿರುವ ಮಡಕೆಗಳನ್ನು ಜೋತು ಹಾಕಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಈ ಮಡಕೆ ಒಡೆಯುವ ಸ್ಪರ್ಧೆ, ಆಟವನ್ನೂ ಆಡಲಾಗುತ್ತದೆ. ಅದೇ ರೀತಿ, ಇಂದು ಸಂಜೆ ರೊಸಾರಿಯೋ ಮೈದಾನದಲ್ಲಿ ಸುಮಾರು 100 ಕ್ಕೂ ಅಧಿಕ ಸ್ಥಳೀಯರು ಸೇರಿಕೊಂಡು ಈ ಅಕ್ವಾ ಫೆಸ್ಟ್ ಎಂಬ ಮಡಕೆ ಒಡೆಯುವ ಕಾರ್ಯಕ್ರಮ ಆಯೋಜಿಸಿದ್ದರು. ಸಂಜೆ ಹೊತ್ತು ಅದೇ ದಾರಿಯಲ್ಲಿ ಮನೆಯ ಮಕ್ಕಳ ಜತೆ ವಾಕಿಂಗ್ಗೆ ತೆರಳಿದ್ದ ಪೊಲೀಸ್ ಕಮಿಷನರ್ ಶಶಿಕುಮಾರ್ ಆಟವನ್ನು ವೀಕ್ಷಿಸುತ್ತಿದ್ದಾಗ ಸ್ಥಳೀಯರು ಅವರನ್ನು ಮಡಕೆ ಒಡೆಯಲು ಆಹ್ವಾನಿಸಿದರು.
ಆಹ್ವಾನವನ್ನು ಸ್ವೀಕರಿಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಕೈಯ್ಯಲ್ಲಿ ಕೋಲು ಹಿಡಿದು ಒಂದಿಷ್ಟು ಹೊತ್ತು ಆ ಮಡಕೆಯನ್ನು ತಲುಪುವ ಬಗ್ಗೆ ಲೆಕ್ಕಾಚಾರ ಹಾಕಿಕೊಂಡು ಅದರತ್ತ ಸಾಗಿ ಒಂದೇ ಹೊಡೆತಕ್ಕೆ ನೀರಿದ್ದ ಮಡಕೆಯನ್ನು ಒಡೆದರು. ಅಲ್ಲಿ ಸೇರಿದ್ದವರು ಕರತಾಡನದ ಮೂಲಕ ಪೊಲೀಸ್ ಆಯುಕ್ತರನ್ನು ಅಭಿನಂದಿಸಿದರು.