ವಿಶ್ರಾಂತ ಪ್ರಾಂಶುಪಾಲ ಡಾ. ಆರ್. ಎಸ್. ಶ್ಯಾನುಭಾಗ್ ನಿಧನ

ಮಂಗಳೂರು: ಮೂಲತಃ ಕುಮಟಾದ ಹಿರಿಯ ಪ್ರಾಧ್ಯಾಪಕ, ವಿಶ್ರಾಂತ ಪ್ರಾಂಶುಪಾಲ ಡಾ. ಆರ್. ಎಸ್. ಶ್ಯಾನುಭಾಗ್ (ರಾಮನಾಥ ಶ್ರೀಧರ ಶ್ಯಾನುಭಾಗ್) ಅ.20 ರಂದು ಮೈಸೂರಿನಲ್ಲಿ ನಿಧನ ಹೊಂದಿದರು.
ಅವರು ಪತ್ನಿ ಕವಯಿತ್ರಿ ವಿಠಾ. ಆರ್.ಎಸ್. ಶ್ಯಾನುಭಾಗ್, ಪುತ್ರ ಚೆನ್ನೈನ ಸೈಂಟ್ ಗೊಬೈನ್ ಕಂಪೆನಿಯ ಸಿಇಒ ವೇಣುಗೋಪಾಲ್ ಆರ್. ಶ್ಯಾನುಭಾಗ್ ಪುತ್ರಿ ಮೈಸೂರಿನ ಎಲ್.ಎನ್.ಟಿ ಕಂಪೆನಿಯ ವಿದ್ಯಾ ಬಾಳಿಗಾ ಅವರನ್ನು ಅಗಲಿದ್ದಾರೆ.
ಇಲೆಕ್ಟ್ರಿಕಲ್ ಇಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಪದವಿ ಪಡೆದಿದ್ದ ಡಾ. ಶ್ಯಾನುಭಾಗ್ ಕೆಇಬಿಯಲ್ಲಿ ಜ್ಯೂನಿಯರ್ ಇಂಜಿನಿಯರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. 1964ರಿಂದ 1997ರ ಅವಧಿಯಲ್ಲಿ ಸುರತ್ಕಲ್ ಎನ್.ಐ.ಟಿ.ಕೆ.ಯಲ್ಲಿ ಉಪನ್ಯಾಸಕ, ಸಹ ಪ್ರಾಧ್ಯಾಪಕ, ಪ್ರಾಧ್ಯಾಪಕರಾಗಿ, ವಿಭಾಗ ಮುಖ್ಯಸ್ಥರಾಗಿದ್ದರು. ಬಳಿಕ ಮಣಿಪಾಲದ ಎಂಐಟಿಯಲ್ಲಿ ಪ್ರಾಧ್ಯಾಪಕರಾಗಿದ್ದರು.
ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜು 2001ರಲ್ಲಿ ಆರಂಭವಾದಾಗ ಮೊದಲ ಪ್ರಾಂಶುಪಾಲರಾಗಿ, ಬಳಿಕ ನಿರ್ದೇಶಕರಾಗಿ 2005ರ ವರೆಗೆ ಅವರು ಸೇವೆ ಸಲ್ಲಿಸಿದ್ದರು. ಸೇವಾ ನಿವೃತ್ತಿಯ ಬಳಿಕ ಮೈಸೂರಿನಲ್ಲಿ ನೆಲೆಸಿದ್ದರು.
ತಮ್ಮ ನಾಲ್ಕೂವರೆ ದಶಕಗಳ ಶೈಕ್ಷಣಿಕ ವೃತ್ತಿ ಜೀವನದಲ್ಲಿ ಶಿಸ್ತು, ಸರಳತೆ, ಸಮಯ ಪ್ರಜ್ಞೆಯಿಂದ ಮಾರ್ಗದರ್ಶಕರಾಗಿ ಗುರುತಿಸಿಕೊಂಡಿದ್ದರು.





