ಬಿಲ್ಕೀಸ್ ಬಾನು ಅತ್ಯಾಚಾರ ಆರೋಪಿಗಳ ಬಿಡುಗಡೆ ಖಂಡಿಸಿ ಪ್ರತಿಭಟನೆ

ಉಡುಪಿ : ಬಿಲ್ಕೀಸ್ ಬಾನು ಅತ್ಯಾಚಾರ ಆರೋಪಿಗಳನ್ನು ಬಿಡುಗಡೆ ಗೊಳಿಸಿರುವುದನ್ನು ಖಂಡಿಸಿ ನ್ಯಾಷನಲ್ ವಿಮೆನ್ಸ್ ಫ್ರಂಟ್ ಉಡುಪಿ ಘಟಕದ ನೇತೃತ್ವದಲ್ಲಿ ರವಿವಾರ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾಕರದ ಬಳಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ವುಮೆನ್ಸ್ ಫ್ರಂಟ್‌ನ ಜಿಲ್ಲಾಧ್ಯಕ್ಷೆ ನಸೀಮಾ ಫಾತಿಮಾ, ಬಿಲ್ಕೀಸ್ ಬಾನು ಪ್ರಕರಣದ ೧೧ ಆರೋಪಿಗಳನ್ನು ಮೋದಿ ಸರಕಾರ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲೇ ಬಿಡುಗಡೆಗೊಳಿಸಿದೆ. ಇದರಿಂದ ನಮ್ಮ ದೇಶದ ಹೀನಾಯ ಸ್ಥಿತಿ ಯಾವ ರೀತಿ ಇದೆ ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ. ದೇಶದ ಸಂವಿಧಾನ ಒಪ್ಪದೆ ಮನುಸ್ಮತಿಯನ್ನು ಒಪ್ಪುವ ನಮ್ಮನ್ನು ಆಳುವವರು ಮಹಿಳೆಯರನ್ನು ಕೀಳಾಗಿ ಕಾಣುತ್ತಿದ್ದಾರೆ. ಇಲ್ಲಿ ಬ್ರಾಹ್ಮಣರಿಗೆ ಒಂದು ಕಾನೂನು ಅಲ್ಪಸಂಖ್ಯಾತರಿಗೆ ಇನ್ನೊಂದು ಕಾನೂನು ಎಂದು ಟೀಕಿಸಿದರು.
ಅತ್ಯಾಚಾರ ಪ್ರಕರಣದ 11 ಆರೋಪಿಗಳ ಬಿಡುಗಡೆ ಆದೇಶವನ್ನು ಕೂಡಲೇ ರದ್ದು ಮಾಡಬೇಕು. ಈಗಾಗಲೇ ಬಿಲ್ಕೀಸ್ ಬಾನು ಕುಟುಂಬಕ್ಕೆ ಘೋಷಿಸಿರುವ ಪರಿಹಾರವನ್ನು ಕೂಡಲೇ ನೀಡಬೇಕು. ಆಕೆಗೆ ಸಂವಿಧಾನದ ಪ್ರಕಾರ ಬದುಕುವ ಹಕ್ಕನ್ನು ಒದಗಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ಉಡುಪಿ ಜಿಲ್ಲಾ ಸಮಿತಿ ಸದಸ್ಯರಾದ ನಸೀಮ್, ಸೌಲತ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಸಮಿತಿ ಸದಸ್ಯೆ ಸಮ್ರಿನ್ ಅಫ್ರೋಝ್ ಕಾರ್ಯಕ್ರಮ ನಿರೂಪಿಸಿದರು.