ಮೊಟ್ಟೆ ಎಸೆದದ್ದು ಡಿಕೆಶಿ ಬಣವೋ, ಪರಮೇಶ್ವರ್ ಬಣವೋ: ಸಚಿವ ಸುನೀಲ್ ಕುಮಾರ್ ಪ್ರಶ್ನೆ

ಸಚಿವ ಸುನೀಲ್ ಕುಮಾರ್
ಉಡುಪಿ, ಆ.21: ಸಿದ್ದರಾಮಯ್ಯ ನಡವಳಿಕೆಯಿಂದ ಕಾಂಗ್ರೆಸ್ ಕಾರ್ಯಕರ್ತರ ಬೇಸರಗೊಂಡಿದ್ದಾರೆ. ಕೊಡಗಿನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಆಕ್ರೋಶ ಪ್ರಕಟ ಮಾಡಿದ್ದಾನೆ. ಸಿದ್ದರಾಮಯ್ಯಗೆ ಮೊಟ್ಟೆ ಎಸೆದದ್ದು ಡಿಕೆ ಶಿವಕುಮಾರ್ ಬಣವೋ ಅಥವಾ ಪರಮೇಶ್ವರ್ ಬಣವೋ ಎಂಬುದನ್ನು ಕಾಂಗ್ರೆಸ್ ತನ್ನ ಆಂತರಿಕ ತನಿಖೆಯಲ್ಲಿ ಬಹಿರಂಗಪಡಿಸಬೇಕು ಎಂದು ಇಂಧನ ಸಚಿವ ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.
ಕಾರ್ಕಳದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿನಾಕಾರಣ ಬಿಜೆಪಿ ಮೇಲೆ ಆರೋಪ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯ ಆಡಳಿತದ ಮೂಲಕವೂ ಹಿಂದೂ ವಿರೋಧಿ ನೀತಿಯನ್ನು ಅನುಸರಿಸಿದ್ದರು. ಸ್ವಾತಂತ್ರ ಹೋರಾಟಗಾರರ ವಿರುದ್ಧ ಮಾತನಾಡಿದಾಗ ಇಡೀ ರಾಜ್ಯದಲ್ಲಿ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದರು.
ಪ್ರತಿಭಟನೆ ಮಾಡಲೇ ಬಾರದು ಎಂದಾದರೆ ಇವರು ಕೇವಲ ಮುಸ್ಲಿಂ ಏರಿಯಾಗಳಲ್ಲಿ ಮಾತ್ರ ಓಡಾಟ ಮಾಡಬೇಕಾಗುತ್ತದೆ. ಉಳಿದ ಏರಿಯಾಗಳಲ್ಲಿ ಸಮಾಜ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಮಾಡಿಯೇ ಮಾಡುತ್ತದೆ. ಪ್ರತಿಭಟನೆಗಳನ್ನು ಸಿದ್ದರಾಮಯ್ಯ ಗೌರವಪೂರ್ಣವಾಗಿ ಸ್ವೀಕರಿಸಬೇಕು. ಅಧಿಕಾರದಲ್ಲಿದ್ದಾಗ ಮತ್ತು ಈಗ ಸಿದ್ದರಾಮಯ್ಯ ಸಮಾಜವಿರೋಧಿ ಹಿಂದೂ ವಿರೋಧಿ ಎಂಬೂದು ಸ್ಪಷ್ಟವಾಗಿದೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ನಿಂದ ಮಡಿಕೇರಿ ಚಲೋ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಚಲೋದಲ್ಲಿ ಕಾಂಗ್ರೆಸ್ನ ಟೂಲ್ ಅಜೆಂಡಾ ಕಾಣುತ್ತಿದೆ. ಕೊಡಗಿಗೆ ಕಾಲ್ನಡಿಗೆ ಮಾಡಲು ಯಾರದ್ದೂ ವಿರೋಧ ಇಲ್ಲ. ನಿಮ್ಮ ಕಾರ್ಯ ಕರ್ತರು ಪ್ರತಿಭಟನೆ ಮಾಡಿದ್ದಾರೆ. ನೀವು ಯಾರ ವಿರುದ್ಧ ಕಾಲ್ನಡಿಗೆ ಮಾಡು ತ್ತೀರಿ? ಯಾರ ವಿರುದ್ಧ ನೀವು ಪ್ರತಿಭಟನೆಗಳನ್ನು ಮಾಡುತ್ತೀರಿ? ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದರು.
ಮಳೆ ನೆರೆ ಹಾನಿಯಾಗಿ ಎಷ್ಟು ದಿನ ಆಗಿದೆ. ಇವತ್ತು ನೆರೆಪೀಡಿತ ಪ್ರದೇಶ ಗಳಿಗೆ ಹೋಗುತ್ತಿರುವುದು ಒಂದು ನಾಟಕ. ಪೂರ್ವ ಯೋಜಿತವಾಗಿಯೇ ಸಿದ್ದರಾಮಯ್ಯ ಓಡಾಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತನೇ ಹೇಳಿಕೆಗಳನ್ನು ಕೊಟ್ಟಿದ್ದಾನೆ. ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧವೇ ಕಾಲ್ನಡಿಗೆ ಮಾಡುತ್ತಾರೆ ಎಂದರೆ ಇದು ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದು ಅವರು ಹೇಳಿದರು.