'ಐವರನ್ನು ಥಳಿಸಿ ಕೊಂದಿದ್ದೇವೆʼ ಎಂದ ರಾಜಸ್ಥಾನ ಬಿಜೆಪಿ ನಾಯಕನ ವಿರುದ್ಧ ಎಫ್‌ಐಆರ್
ಪ್ರಚೋದನಕಾರಿ ಭಾಷಣದ ವಿಡಿಯೋ ವೈರಲ್

ಜೈಪುರ, ಆ.21: ಗೋಹತ್ಯೆಯಲ್ಲಿ ಶಾಮೀಲಾದವರನ್ನು ಕೊಲ್ಲುವಂತೆ ಬಿಜೆಪಿಯ ರಾಜಸ್ಥಾನದ ಘಟಕದ ನಾಯಕ ಗ್ಯಾನ್ ದೇವ್ ಅಹುಜಾ ಅವರು ಗುಂಪೊಂದಕ್ಕೆ ಕರೆ ನೀಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಭಾರೀ ವಿವಾದ ಸೃಷ್ಟಿಸಿದೆ.
ಈಗಾಗಲೇ ತನ್ನ ಬೆಂಬಲಿಗರು ಐದು ಮಂದಿಯನ್ನು ಹೊಡೆದು ಸಾಯಿಸಿರುವುದಾಗಿಯೂ ಆತ ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಸುಮಾರು ಒಂದು ನಿಮಿಷ ಕಾಲದ ಈ ವಿಡಿಯೋವನ್ನು ಕಾಂಗ್ರೆಸ್ ಪಕ್ಷದ ರಾಜಸ್ಥಾನ ಘಟಕದ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಾಸ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘ಬಿಜೆಪಿಯು ಒಂದು ಧಾರ್ಮಿಕ ಭಯೋತ್ಪಾದನೆಯ ಹಾಗೂ ದ್ವೇಷವನ್ನು ಹರಡುವ ಪಕ್ಷವೆಂಬುದಕ್ಕೆ ಬೇರೇನು ಪುರಾವೆ ಬೇಕು? ’ ಎಂದು ದೋಸ್ರಾ ಅವರು ಟ್ವಿಟ್ಟರ್‌ನಲ್ಲಿಬರೆದಿದ್ದಾರೆ. ಬಿಜೆಪಿಯ ನೈಜ ಮುಖವು ಇಡೀ ದೇಶದ ಮುಂದೆ ಅನಾವರಣಗೊಂಡಿದೆ ಎಂದವರು ಟೀಕಿಸಿದ್ದಾರೆ.
ಕೋಮು ದ್ವೇಷವನ್ನು ಹರಡಿದ ಆರೋಪದಲ್ಲಿ ಅಹುಜಾ ವಿರುದ್ಧ ರಾಜಸ್ಥಾನ ಪೊಲೀಸರು ಭಾರತೀಯ ದಂಡಸಂಹಿತೆಯ 153 ಎ ಸೆಕ್ಷನ್‌ನಡಿ ಪ್ರಕರಣ ದಾಖಲಿಸಿದ್ದಾರೆಂದು ವರದಿಗಳು ತಿಳಿಸಿವೆ.
ವಿವಾದಾತ್ಮಕ ವಿಡಿಯೋದಲ್ಲಿ ಮಾಜಿ ಶಾಸಕ ಅಹುಜಾ ಅವರು ಸಭೆಯೊಂದರಲ್ಲಿ, 45 ವರ್ಷ ವಯಸ್ಸಿನ ಚಿರಾಂಜಿಲಾಲ್ ಸೈನಿ ಎಂಬವರನ್ನು ಗುಂಪೊಂದು ಥಳಿಸಿ ಹತ್ಯೆಗೈದಿರುವ ವಿರುದ್ಧ ಪ್ರತಿಭಟನೆ ನಡೆಸುವಂತೆ ಭಾಷಣಕಾರನೊಬ್ಬ ಸ್ಥಳೀಯರಿಗೆ ಕರೆ ನೀಡುತ್ತಿದ್ದಾಗ ಭಾಷಣಕಾರನೊಬ್ಬನನ್ನು ತಡೆದ ಮಾಜಿ ಶಾಸಕ ಸೈನಿ ಅವರು ಪ್ರಚೋದನಕಾರಿ ಮಾತುಗಳನ್ನು ಆಡಿದರೆನ್ನಲಾಗಿದೆ.
ತರಕಾರಿ ವ್ಯಾಪಾರಿಯಾಗಿದ್ದ ಸೈನಿಯನ್ನು ಆಗಸ್ಟ್ 14ರಂದು 20 ಮಂದಿಯ ಗುಂಪೊಂದು ರಾಜಸ್ಥಾನದ ಅಲ್ವಾರ್‌ನಲ್ಲಿ ಟ್ರಾಕ್ಟರ್ ಕಳವಿಗೆ ಯತ್ನಿಸುತ್ತಿದ್ದಾನೆಂಬ ಶಂಕಿಸಿ, ಥಳಿಸಿತ್ತು. ಗಂಭೀರ ಗಾಯಗೊಂಡಿದ್ದ ಸೈನಿ ಜೈಪುರದ ಆಸ್ಪತ್ರೆಲ್ಲಿ ಸಾವನ್ನಪ್ಪಿದ್ದರು.
‘‘ಲಾಲ್ವಂಡಿ ಇರಲಿ ಅಥವಾ ಬೆಹ್ರೂರ್ ಇರಲಿ ಈವರೆಗೆ ನಾವು ಐದು ಮಂದಿಯನ್ನು ಹತ್ಯೆಗೈದಿದ್ದೇವೆ. ಆದರೆ ಈ ಪ್ರದೇಶದಲ್ಲಿ ಯಾರೋ ಒಬ್ಬರನ್ನು ಅವರು ಥಳಿಸಿ ಕೊಂದಿದ್ದಾರೆ. ಸೈನಿಯನ್ನು ಹತ್ಯೆಗೈದವರನು ಕೊಲ್ಲಲು ನಾನು ಕಾರ್ಯಕರ್ತರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇನೆ. ಅವರನ್ನು ನಾವು ಜೈಲಿನಿಂದ ಜಾಮೀನಿನಲ್ಲಿ ಬಿಡುಗಡೆಗೊಳಿಸುತ್ತೇವೆ ಎಂದು ಅಹುಜಾ ಹೇಳಿರುವುದು ವಿಡಿಯೋ ದಲ್ಲಿ ಕಂಡುಬಂದಿದೆ.
2018ರಲ್ಲಿ ಲಾಲ್ವಾದ್ನಿಯಲ್ಲಿ ರಕ್ಬರ್ ಖಾನ್ ಹಾಗೂ 2018ರಲ್ಲಿ ಬೆಹ್ರೂರ್‌ನಲ್ಲಿ ಪೆಹ್ಲು ಖಾನ್ ಅವರನ್ನು ಸಾಮೂಹಿಕವಾಗಿ ಥಳಿಸಿ ಹತ್ಯೆಗೈದ ಪ್ರಕರಣವನ್ನು ಅಹುಜಾ ಭಾಷಣದಲ್ಲಿ ಪ್ರಸ್ತಾವಿಸಿದ್ದಾನೆ. ಗೋವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆಂಬ ಆರೋಪದಲ್ಲಿ ಇವರಿಬ್ಬರು ಸ್ವಘೋಷಿತ ಗೋರಕ್ಷಕರ ಗುಂಪೊಂದು ಹತ್ಯೆಗೈದಿತ್ತು.
ಆನಂತರ ಪಿಟಿಐ ಸುದ್ದಿಸಂಸ್ಥೆಯ ಬಾತ್ಮಿದಾರರನೊಬ್ಬರು ಈ ಹೇಳಿಕೆಯ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಅಹುಜಾರನ್ನು ಸಂಪರ್ಕಿಸಿದಾಗ, ಗೋಹತ್ಯೆ ಹಾಗೂ ಗೋಕಳ್ಳಸಾಗಣೆಯಲ್ಲಿ ತೊಡಗಿರುವ ಯಾರನ್ನೂ ಕೂಡಾ ಉಳಿಸುವುದಿಲ್ಲವೆಂದು ಪುನರುಚ್ಚರಿಸಿರುವುದಾಗಿ ತಿಳಿದುಬಂದಿದೆ.
ಸ್ಥಳೀಯ ಆರೆಸ್ಸೆಸ್ ನಾಯಕನೊಬ್ಬನ ಸಮೀಪದಲ್ಲಿರುವಾಗಲೇ ತಾನು ಈ ಹೇಳಿಕೆ ನೀಡಿರುವುದಾಗಿ ಅಹುಜಾ ತಿಳಿಸಿದ್ದಾರೆ. ಅಹುಜಾರ ಹೇಳಿಕೆಯಿಂದ ತಾನು ಅಂತರ ಕಾಯ್ದುಕೊಂಡಿರುವುದಾಗಿ ಬಿಜೆಪಿ ತಿಳಇಸಿದೆ.







