ವರವರ ರಾವ್‌ಗೆ ಜಾಮೀನು ಬಿಡುಗಡೆಗೆ 14 ಶರತ್ತುಗಳನ್ನು ವಿಧಿಸಿದ ಮುಂಬೈ ಕೋರ್ಟ್

ಹೊಸದಿಲ್ಲಿ,ಆ.26: ತನ್ನ ಅನುಮತಿಯಿಲ್ಲದೆ ನಗರದಿಂದ ಹೊರಹೋಗದಿರುವುದು ಸೇರಿದಂತೆ 14 ಶರತ್ತುಗಳನ್ನು ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿ, ಮಾನವಹಕ್ಕು ಹೋರಾಟಗಾರ ವರವರ ರಾವ್ ಅವರ ಜಾಮೀನು ಬಿಡುಗಡೆಗೆ ಮುಂಬೈನ ವಿಶೇಷ ನ್ಯಾಯಾಲಯವು ನಿಗದಿಪಡಿಸಿರುವುದಾಗಿ ಎಂದು ಲೈವ್ ಲಾ ವರದಿ ಮಾಡಿದೆ.
ಭೀಮಾ ಕೋರೆಗಾಂವ್ ಗ್ರಾಮದಲ್ಲಿ ಜಾತಿ ಹಿಂಸಾಚಾರವನ್ನು ಭುಗಿಲೆಬ್ಬಿಸಲು ಸಂಚು ಹೂಡಿದ ಆರೋಪದಲ್ಲಿ ಕಠಿಣವಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ದೋಷಾರೋಪ ದಾಖಲಿಸಲ್ಪಟ್ಟ 16 ಮಂದಿ ಕಾರ್ಯಕರ್ತರಲ್ಲಿ ರಾವ್ ಕೂಡಾ ಒಬ್ಬರು.
ಶನಿವಾರ ವಿಶೇಷ ನ್ಯಾಯಾಧೀಶ ರಾಜೇಶ್ ಕ್ಷತ್ರಿಯ ಅವರು ರಾವ್‌ಗೆ ಜಾಮೀನು ಶರತ್ತುಗಳನು ಪ್ರಕಟಿಸಿದ್ದಾರೆ. ಮುಂಬೈ ನಗರದಿಂದ ಹೊರಹೋಗುವಾಗ ಅನುಮತಿಯನ್ನು ಪಡೆಯುವಂತೆ ಹಾಗೂ ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆ ನೀಡಬಾರದೆಂಬ ಶರತ್ತುಗಳನ್ನು ಒಡ್ಡಲಾಗಿದೆ.
ಅಲ್ಲದೆ ಪ್ರತಿ ಹದಿನೈದು ದಿನಕ್ಕೊಮ್ಮೆ ವಾಟ್ಸ್‌ಅಪ್ ವಿಡಿಯೋ ಕರೆ ಮೂಲಕ ತನ್ನ ಹಾಜರಾತಿಯನ್ನು ನಮೂದಿಸುವಂತೆ ಹಾಗೂ ಪ್ರತಿ ಮೂರು ತಿಂಗಳಿಗೊಮ್ಮೆ ಪೊಲೀಸ್ ಠಾಣೆಯೆದುರು ಹಾಜರಾಗಬೇಕೆಂಬ ಶರತ್ತನ್ನು ಒಡ್ಡಲಾಗಿದೆಯೆಂದು ರಾವ್ ತಿಳಿಸಿದ್ದಾರೆ.
ಅಲ್ಲದೆ ಮನೆಯ ವಿಳಾಸ ಹಾಗೂ ತನ್ನ ಜೊತೆ ವಾಸವಾಗಿರುವ ವ್ಯಕ್ತಿಯ ಹಾಗೂ ಮೂವರು ಬಂಧುಗಳ ದೂರವಾಣಿ ಸಂಪರ್ಕ ಸಂಖ್ಯೆಗಳನ್ನು ಕೂಡಾ ಒದಗಿಸುವಂತೆ ಕೇಳಲಾಗಿದೆ. ಹಾಜರಾತಿಯಿಂದ ವಿನಾಯಿತಿ ದೊರೆಯದೆ ಇದ್ದಲ್ಲಿ ಅವರು ವಿಚಾರಣಾ ನ್ಯಾಯಾಲಯದ ಕಲಾಪಗಳಿಗೆ ಹಾಜರಾಗುತ್ತಿರಬೇಕು ಮತ್ತು ಪ್ರಕರಣದ ಇತರ ಆರೋಪಿಗಳ ಜೊತೆ ಸಂವಹನವನ್ನು ಹೊಂದಿರಕೂಡದು ಎಂದು ಕೂಡಾ ಶರತ್ತಿನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ ಇಂತಹದೇ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಯ ಜೊತೆ ಯಾವುದೇ ಸಂವಹನ ವಿಧಾನದ ಮೂಲಕ ದೇಶೀಯ ಅಥವಾಅಂತಾರಾಷ್ಟ್ರೀಯ ಕರೆ ಮಾಡಬಾರದು. ವೈಯಕ್ತಿಕವಾಗಿ ಅಥವಾ ಇತರ ಯಾವುದೇ ವ್ಯಕ್ತಿಯ ಮೂಲಕ ಪ್ರಾಸಿಕ್ಯೂಶನ್ ಸಾಕ್ಷ್ಯಗಳನ್ನು ತಿರುಚಲು ಯತ್ನಿಸಬಾರದೆಂದು ಶರತ್ತಿನಲ್ಲಿ ತಿಳಿಸಲಾಗಿದೆ.
83 ವರ್ಷ ವಯಸ್ಸಿನ ವರವರ ರಾವ್ ಅವರನ್ನು 2018ರ ಆಗಸ್ಟ್ 28ರಂದು ಹೈದರಾಬಾದ್‌ನಲ್ಲಿರುವ ಅವರ ನಿವಾಸದ ಬಳಿ ಬಂಧಿಸಲಾಯಿತು. ಆಗಸ್ಟ್ 10ರಂದು ಸುಪ್ರೀಂಕೋರ್ಟ್ ವೈದ್ಯಕೀಯ ಕಾರಣಗಳಿಗಾಗಿ ಅವರಿಗ ಜಾಮೀನು ಬಿಡುಗಡೆಗೊಳಿಸಿತ್ತು. ‘‘ ವೃದ್ದಾಪ್ಯ ಹಾಗೂ ಆರೋಗ್ಯ ಕ್ಷೀಣಿಸುತ್ತಿಉರವ’ ಹಿನ್ನೆಲೆಯಲ್ಲಿ ತನಗೆ ಜಾಮೀನು ಬಿಡುಗಡೆಯನ್ನು ಖಾಯಂಗೊಳಿಸುವಂತೆ ರಾವ್ ಅವರು ಮನವಿ ಸಲ್ಲಿಸಿದ್ದರು.
ತಾನು ನರರೋಗ, ಸಂಭಾವ್ಯ ಹರ್ನಿಯಾದಿಂದಾಗಿ ಉದರಬೇನೆ ಹಾಗೂ ರೋಗಲಕ್ಷಣ ರಹಿತ ಪಾರ್ಕಿನ್‌ಸನ್ ಕಾಯಿಲೆಯಿಂದ ಬಳಲುತ್ತಿರುವುದಾಗಿ ರಾವ್ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.







