ವಿಜಯಪುರ | ಸಾವರ್ಕರ್ ಫೋಟೊ ಅಂಟಿಸಿದ ಆರೋಪಿಯ ಶೀಘ್ರ ಬಂಧನಕ್ಕೆ ಕಾಂಗ್ರೆಸ್ ಆಗ್ರಹ

ವಿಜಯಪುರ, ಆ.22: ಸಾವರ್ಕರ್ ಫೋಟೊವನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯ ಗೋಡೆ, ಕಿಟಕಿ ಮೇಲೆ ಅಂಟಿಸಿರುವ ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ರಾಜು ಆಲಗೂರ ಒತ್ತಾಯಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಹೂಗಾರ ಎಂಬಾತ ತಾನೇ ಸಾವರ್ಕರ್ ಫೋಟೊ ಅಂಟಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತನ ವಿರುದ್ಧ ಪಕ್ಷದ ವತಿಯಿಂದ ದೂರು ದಾಖಲಿಸಲಾಗುವುದು. ತಕ್ಷಣ ಆತನನ್ನು ಪೊಲೀಸರು ಬಂಧಿಸಬೇಕು. ಇಲ್ಲವಾದಲ್ಲಿ ಜಿಲ್ಲಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಇದನ್ನೂ ಓದಿ: ವಿಜಯಪುರ: ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಭಾವಚಿತ್ರಗಳನ್ನು ಅಂಟಿಸಿದ ಕಿಡಿಗೇಡಿಗಳು
ಬ್ರಿಟಿಷರಲ್ಲಿ ಆರು ಬಾರಿ ಕ್ಷಮಾಪಣೆ ಕೇಳಿದ ವ್ಯಕ್ತಿ ಸ್ವಾತಂತ್ರ್ಯ ಹೋರಾಟಗಾರನಾಗಲು ಸಾಧ್ಯವಿಲ್ಲ ಎಂದ ಪ್ರೊ.ರಾಜು ಆಲಗೂರ, ಬಿಜೆಪಿಯವರು ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಬಗ್ಗಲ್ಲ. ಇಂತಹ ಘಟನೆ ಮರುಕಳಿಸಿದರೆ ನಾವು ಕೂಡ ಅವರಿಗೆ ನಾಪಥ್ಯವಾಗುವ ನಾಯಕರ ಚಿತ್ರವನ್ನು ಬಿಜೆಪಿ ನಾಯಕರ ಮನೆ ಮೇಲೆ ಅಂಟಿಸಬೇಕಾಗುತ್ತದೆ ಎಂದರು.
ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಕಾರ್ಯಕ್ರಮ ಆದ ಮೇಲೆ ಬಿಜೆಪಿಯವರಿಗೆ ಆತಂಕ ಶುರುವಾಗಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಹಮೀದ್ ಮುಶ್ರೀಫ್, ವೈಜನಾಥ ಕರ್ಪೂರಮಠ, ಸಿದ್ದು ಛಾಯಗೋಳ, ಆರತಿ ಶಹಾಪುರ, ಝಮೀರ್ ಭಕ್ಷಿ, ರಫೀಕ್ ಟಪಾಲ, ವಸಂತ ಹೊನಮೋಡೆ ಇದ್ದರು.







