ಭಟ್ಕಳ | ಅಪಹರಣಕ್ಕೀಡಾದ ಬಾಲಕ ಗೋವಾದಲ್ಲಿ ಪತ್ತೆ: ಓರ್ವನ ಬಂಧನ
ಸಂಬಂಧಿಕನಿಂದಲೇ ಕೃತ್ಯ: ಎಸ್ಪಿ ಮಾಹಿತಿ

ಅಲಿ ಸಾದಾ
ಕಾರವಾರ, ಆ.22: ಎರಡು ದಿನಗಳ ಹಿಂದೆ ಭಟ್ಕಳದ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಆಝಾದ್ ನಗರದಲ್ಲಿ ಅಪಹರಣಕ್ಕೀಡಾಗಿದ್ದ (Kindap) ಎಂಟು ವರ್ಷದ ಬಾಲಕನನ್ನು ಗೋವಾದ ಕಲಂಗುಟ್ ಬೀಚ್ ಬಳಿ ಸೋಮವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಪತ್ತೆಹಚ್ಚಿ ರಕ್ಷಿಸಲಾಗಿದೆ. ಕುಟುಂಬದಲ್ಲಿನ ಹಣದ ವ್ಯವಹಾರದ ಹಿನ್ನೆಲೆಯಲ್ಲಿ ಬಾಲಕನ ಅಜ್ಜ (ತಾಯಿಯ ಮಾವ) ಅಪಹರಣ ಮಾಡಿಸಿದ್ದು, ವಿಚಾರಣೆಯಲ್ಲಿ ಬಯಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್ ತಿಳಿಸಿದ್ದಾರೆ.
ಮಾಧ್ಯಮದವರಿಗೆ ಈ ಕುರಿತು ಮಾಹಿತಿ ನೀಡಿದ ಎಸ್ಪಿ, ಪ್ರಕರಣಕ್ಕೆ ಸಂಬಂಧಿಸಿ ಭಟ್ಕಳದ ಬದ್ರಿಯಾ ನಿವಾಸಿ ಅನೀಸ್ (29) ಎಂಬಾತನನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ಚಾಕು ಮತ್ತು ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಕೃತ್ಯದಲ್ಲಿ ಇನ್ನೂ ನಾಲ್ವರು ಭಾಗಿಯಾಗಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ. ಬಾಲಕನ ತಾಯಿಯ ಮಾವ, ಸದ್ಯ ಸೌದಿ ಅರೇಬಿಯದಲ್ಲಿರುವ ಇನಾಯತುಲ್ಲಾ ಈ ಕೃತ್ಯ ಮಾಡಿಸಿದ್ದು, ಆತ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕುಂದಾಪುರ | ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಪತಿ
ಎಂಟು ವರ್ಷದ ಬಾಲಕ ಅಲಿ ಸಾದಾ ಆ.20ರಂದು ರಾತ್ರಿ 8ಕ್ಕೆ ಭಟ್ಕಳದ ಆಝಾದ್ ನಗರದಿಂದ ಅಪಹರಣಕ್ಕೀಡಾಗಿದ್ದನು. ಮನೆಯ ಸಮೀಪದ ಅಂಗಡಿಯಲ್ಲಿ ಬ್ರೆಡ್ ಖರೀದಿಸಿ ವಾಪಸಾಗುತ್ತಿದ್ದಾಗ ಬಾಲಕನನ್ನು ಕಾರಿನಲ್ಲಿ ಬಂದ ಆರೋಪಿಗಳು ಅಪಹರಿಸಿದ್ದರು. ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಸಂಬಂಧ ಭಟ್ಕಳ ಉಪ ವಿಭಾಗ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಐದು ತಂಡಗಳನ್ನು ರಚಿಸಲಾಗಿತ್ತು. ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳು ಮತ್ತು ತಾಂತ್ರಿಕ ದಾಖಲೆಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಬಾಲಕನ ತಂದೆ ಮಸ್ಕತ್ನಲ್ಲಿ ಉದ್ಯೋಗಿಯಾಗಿದ್ದಾರೆ. ಅವರಿಗೆ ಮತ್ತು ಪತ್ನಿಯ ಮಾವ, ಪ್ರಮುಖ ಆರೋಪಿ ಇನಾಯತುಲ್ಲಾ ನಡುವೆ ಹಣದ ವ್ಯವಹಾರವಿದ್ದು, ಇದನ್ನು ಬಗೆಹರಿಸಲು ಒತ್ತಡ ಹೇರುವ ಸಲುವಾಗಿ ಬಾಲಕನನ್ನು ಅಪಹರಣ ಮಾಡಿಸಿದ್ದಾನೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.








