ಬಾಡಿಗೆ ಪ್ರಯಾಣಕ್ಕೆ ಗೊತ್ತುಪಡಿಸುವ ಬಗ್ಗೆ ಟ್ಯಾಕ್ಸಿ ಚಾಲಕರು ಜಾಗೃತರಾಗಿರಲು ಮನವಿ
ಬಂಟ್ವಾಳದ ಟ್ಯಾಕ್ಸಿ ಚಾಲಕನ ಕೊಲೆ ಯತ್ನ ಪ್ರಕರಣ

ಮಂಗಳೂರು, ಆ. 22: ಬಾಡಿಗೆಗೆ ಟ್ಯಾಕ್ಸಿ ಗೊತ್ತುಪಡಿಸಿಕೊಂಡು ಅರ್ಧ ದಾರಿಯಲ್ಲಿ ಚಾಲಕರನ್ನು ಲೂಟಿ ಮಾಡುವ, ಹಲ್ಲೆ ಮಾಡುವ ದುಷ್ಕತ್ಯಗಳು ನಡೆಯುತ್ತಿದ್ದು, ಈ ಬಗ್ಗೆ ಚಾಲಕರು ಎಚ್ಚರಿಕೆ ವಹಿಸಬೇಕು ಎಂದು ದ.ಕ. ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಸಲಹೆ ನೀಡಿದೆ.
ದ.ಕ. ಜಿಲ್ಲೆಯ ಬಂಟ್ವಾಳ ಕೊಯಿಲ ನಿವಾಸಿ ಹಾಗೂ ಅಸೋಸಿಯೇಶನ್‌ನ ಸದಸ್ಯರಾದ ಅಬ್ದುಲ್ ರಹಿಮಾನ್ ಎಂಬ ಟ್ಯಾಕ್ಸಿ ಚಾಲಕರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಉಲ್ಲೇಖಿಸಿ ಸಂಘದ ಅಧ್ಯಕ್ಷ ದಿನೇಶ್ ಕುಂಪಲ ಎಂ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಆ.20ರಂದು ಮಂಗಳೂರಿನ ಲೇಡಿಗೋಶನ್ ಬಳಿಯ ಪಾರ್ಕ್‌ನಿಂದ ಅಬ್ದುಲ್ ರಹಿಮಾನ್ ಎಂಬ ಚಾಲಕರ ಬಳಿ ಬಂದ ಮೂರು ಮಂದಿ ಅಪರಿಚಿತರು ಸುಬ್ರಹ್ಮಣ್ಯಕ್ಕೆ ಬಾಡಿಗೆ ಗೊತ್ತುಪಡಿಸಿದ್ದರು. ಬಳಿಕ ಅರ್ಧ ದಾರಿಯಲ್ಲಿ ಮುರ್ಡೇಶ್ವರಕ್ಕೆ ತೆರಳಲು ಸೂಚಿಸಿದ್ದು, ಅಲ್ಲಿಗೆ ತೆರಳಿದ ಬಳಿಕ ಹೊನ್ನಾವರ ಕಡೆಗೆ ಹೋಗುವಂತೆ ಒತ್ತಾಯಿಸಿದ್ದಾರೆ. ಚಾಲಕನಿಗೆ ಈ ಸಂದರ್ಭ ಅನುಮಾನ ಬಂದು ವಾಹನ ನಿಲ್ಲಿಸಲು ಪ್ರಯತ್ನಿಸುವ ಸಂದರ್ಭದಲ್ಲಿ ಹಠಾತ್ತಾಗಿ ಟ್ಯಾಕ್ಸಿಯಲ್ಲಿದ್ದ ಪ್ರಯಾಣಿಕರು ಚೂರಿಯಿಂದ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಮಂಕಿ ಪೊಲೀಸ್ ಠಾಣೆಯ ಬಳಿ ಗಸ್ತು ನಿರತರಾಗಿದ್ದ ಪೊಲೀಸರು ಬಂದು ಚಾಲಕನನ್ನು ರಕ್ಷಿಸಿದ್ದಾರೆ. ಮಾತ್ರವಲ್ಲದೆ ಟ್ಯಾಕ್ಸಿಯಿಂದ ತಪ್ಪಿಸಿ ಓಡಿಹೋಗಲು ಯತ್ನಿಸಿದ್ದ ಮೂವರು ದುಷ್ಕರ್ಮಿಗಳನ್ನು ಸ್ಥಳೀಯರು ಹಾಗೂ ಪೊಲೀಸರು ಬೆನ್ನಟ್ಟಿ ಹಿಡಿದು ಪ್ರಕರಣ ದಾಖಲಿಸಿದ್ದಾರೆ. ಇಂತಹ ಕೃತ್ಯಗಳು ಸಾಕಷ್ಟು ಈ ಹಿಂದೆಯೂ ನಡೆದಿದ್ದು, ಚಾಲಕರು ಈ ರೀತಿ ಒಂದು ಕಡೆಗೆ ಬಾಡಿಗೆ ಗೊತ್ತುಪಡಿಸಿ ಇನ್ನೊಂದು ಕಡೆಗೆ ತೆರಳಲು ನಿರ್ದೇಶಿಸುವ ಪ್ರಯಾಣಿಕರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ದಿನೇಶ್ ಕುಂಪಲ ಹೇಳಿದರು.
ಪ್ರಯಾಣಿಕರ ಸೋಗಿನಲ್ಲಿದ್ದ ದುಷ್ಕರ್ಮಿಗಳು ತಮ್ಮ ಜತೆ ಖಾರದ ಪುಡಿ, ಹಗ್ಗ, ಚಾಕುವನ್ನು ಹೊಂದಿದ್ದರು. ಗಾಡಿ ಚಲಾಯಿಸುತ್ತಿರುವಾಗಲೇ ಚಾಲಕ ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದನ್ನು ಅಂದು ದಾರಿಯಲ್ಲಿ ಗಸ್ತಿನಲ್ಲಿದ್ದ ಪೊಲೀಸರು ಕಂಡು ಸಹಕರಿಸಿದ ಕಾರಣ ಆತ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಹಾಗಿದ್ದರೂ ಚಾಲಕನ ಕೈ ಹಾಗೂ ಕುತ್ತಿಗೆಗೆ ಚೂರಿ ಇರಿತದ ಗಾಯವಾಗಿದೆ. ಅದು ಉತ್ತರ ಕರ್ನಾಟಕದ ದುಷ್ಕರ್ಮಿಗಳ ತಂಡವೆಂದು ಪೊಲೀಸ್ ವಿಚಾರಣೆಯ ವೇಳೆ ತಿಳಿದುಬಂದಿದೆ. ಬಾಡಿಗೆ ಗೊತ್ತುಪಡಿಸಿಕೊಂಡು ನಿರ್ಜನ ಪ್ರದೇಶಕ್ಕೆ ಚಾಲಕನನ್ನು ವಾಹನ ಚಲಾಯಿಸಿಕೊಂಡು ಸಾಗುವ ಈ ತಂಡ ಅಲ್ಲಿ ಚಾಲಕನಿಂದ ಗಾಡಿ ಕಿತ್ತುಕೊಂಡು ಪರಾರಿಯಾಗುವ ತಂಡ ಇದಾಗಿರುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ದುಷ್ಕರ್ಮಿಗಳು ಟ್ಯಾಕ್ಸಿಗಳನ್ನು ಬಾಡಿಗೆ ಗೊತ್ತುಪಡಿಸಿ ಅರ್ಧ ದಾರಿಯಲ್ಲಿ ತಮ್ಮ ಅಕ್ರಮಗಳಿಗೆ ಬಳಸಿಕೊಂಡು ಬಳಿಕ ಅಮಾಯಕ ಚಾಲಕರು ಜೈಲು ಶಿಕ್ಷೆ ಅನುಭವಿಸಬೇಕಾದ ಪ್ರಮೇಯವೂ ನಮ್ಮಲ್ಲಿ ನಡೆದಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಆನಂದ ಕೆ., ಉಪಾಧ್ಯಕ್ಷ ಹರೀಶ್ ಶೆಟ್ಟಿ, ಕೋಶಾಧಿಕಾರಿ ಸುರೇಶ್ ಸಾಲ್ಯಾನ್, ಸಂತ್ರಸ್ತ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.