ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಪುನಃ ಜೈಲಿಗೆ ಕಳುಹಿಸುವಂತೆ ಜನವಾದಿ ಮಹಿಳಾ ಸಂಘಟನೆ ಒತ್ತಾಯ

ಕೆ.ಆರ್.ಪುರ, ಆ.22: ಗುಜರಾತ್‍ನ ಗೋಧ್ರಾದಲ್ಲಿ 2002ರಲ್ಲಿ 5 ತಿಂಗಳ ಬಸುರಿ ಬಿಲ್ಕಿಸ್ ಬಾನು, ಎರಡು ದಿನಗಳ ಬಾಣಂತಿಯಾಗಿದ್ದ ಆಕೆಯ ತಂಗಿ ಹಾಗೂ ಕುಟಂಬದವರ ಮೇಲೆ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಗೌರಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ರಾಮಮೂರ್ತಿನಗರದ ಚನ್ನಸಂದ್ರ ಮೇಲ್ಸೇತುವೆ ಬಳಿಕ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಬಿಲ್ಕಿಸ್ ಬಾನು ಅವರ ಮೂರು ವರ್ಷದ ಮಗುವನ್ನು ಕಲ್ಲಿಗೆ ಅಪ್ಪಳಿಸಿ ಸಾಯಿಸಲಾಗಿತ್ತು. ಆರೋಪ ಸಾಬೀತಾಗಿ 11 ಜನರಿಗೆ ಸಿಬಿಐ ಕೋರ್ಟ್ ನೀಡಿದ ಜೀವಾವಧಿ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿತ್ತು. ಹೀಗೆ ಜೀವಾವಧಿ ಶಿಕ್ಷೆ ಆನುಭವಿಸುತ್ತಿದ್ದ 11 ಜನರನ್ನು ಗುಜರಾತ್ ಸರಕಾರ 75ನೇ ಸ್ವಾತಂತ್ರ್ಯ ದಿನದಂದು 14 ವರ್ಷ ಜೈಲುವಾಸ ಅನುಭವಿಸಿದವರಿಗೆ ಇರುವ ಅವಕಾಶವನ್ನು ಬಳಸಿ ಬಿಡುಗಡೆ ಮಾಡಿರುವುದು ಖಂಡನೀಯ ಎಂದು ಅವರು ಕಿಡಿಗಾರಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ಕೆಂಪು ಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಧ್ವಜ ಹಾರಿಸುವಾಗ ‘ಎಲ್ಲ ಭಾರತೀಯರಲ್ಲಿ ನನ್ನದೊಂದು ಮನವಿ, ನಮ್ಮ ದೈನಂದಿನ ಜೀವನದಲ್ಲಿ ಮಹಿಳೆಯರ ಬಗೆಗಿನ ನಮ್ಮ ಧೋರಣೆಯನ್ನು ಬದಲಿಸಿಕೊಳ್ಳೋಣ, ಕನಸಿನ ಭಾರತ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅತ್ಯಂತ ದೊಡ್ಡದು’ ಎಂದು ಹೇಳಿದ್ದರು ಎಂದು ಗೌರಮ್ಮ ತಿಳಿಸಿದರು.
ಅಲ್ಲದೆ, ಭಾರತದ ಪ್ರಗತಿಗೆ ಮಹಿಳೆಯರ ಕುರಿತ ಗೌರವದ ಭಾವನೆ ಅತ್ಯಗತ್ಯ. ಒಂದು ವ್ಯತಿರಿಕ್ತ ಭಾವನೆ ನಮ್ಮೊಳಗೆ ನುಸುಳಿ, ನಾವು ಕೆಲವೊಮ್ಮೆ ಮಹಿಳೆಯರ ಘನತೆಗೆ ಕುಂದುಂಟಾಗುವಂತೆ ನಡೆದುಕೊಳ್ಳುತ್ತೇವೆ. ಅದರಿಂದ ಹೊರಬರಲು ಪ್ರತಿಜ್ಞೆ ಮಾಡೋಣ’ ಎಂದು ಹೇಳಿದ ದಿನವೇ ಪ್ರಧಾನಿಯವರ ತವರಿನಲ್ಲಿ ಅಪರಾಧಿಗಳ ಬಿಡುಗಡೆ ಮಾಡಿರುವುದನ್ನು ದೇಶದ ಸ್ವಾಭಿಮಾನಿ ಮಹಿಳೆಯರಿಗೆ ಮಾಡಿದ ಘನಘೋರ ಅನ್ಯಾಯ ಎಂದು ಅವರು ಆರೋಪಿಸಿದರು.
2018ರ ಜು.18ರಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಕೈಗೊಂಡ ತೀರ್ಮಾನದ ಪ್ರಕಾರ ಮರಣ ದಂಡನೆ, ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕೈದಿಗಳು ಸನ್ನಡತೆಯ ಆಧಾರದ ಮೇಲೆ ಬಿಡುಗಡೆಗೆ ಅರ್ಹರಲ್ಲ ಎಂದು ಗೌರಮ್ಮ ತಿಳಿಸಿದರು.
ಕೇಂದ್ರ ಸರಕಾರದ ಆದೇಶವನ್ನು ಉಲ್ಲಂಘಿಸಿ ಅಪಾರಾಧಿಗಳನ್ನು ರಕ್ಷಿಸುವ ಸಲುವಾಗಿ ಬಿಡುಗಡೆ ಮಾಡಿರುವ ಗುಜರಾತ್ ಸರಕಾರದ ನಡೆಯನ್ನು ಸಮ್ಮತಿಸಿರುವಂತೆ ಮೌನವಾಗಿರುವ ಪ್ರಧಾನಮಂತ್ರಿ, ಗೃಹ ಮಂತ್ರಿ ಮತ್ತು ಕೇಂದ್ರ ಸರಕಾರದ ನಡೆಯನ್ನು ನಾವು ಅತಿ ಉಗ್ರವಾಗಿ ಖಂಡಿಸುತ್ತೇವೆ ಎಂದು ಅವರು ಹೇಳಿದರು.
ತಕ್ಷಣವೇ 11 ಜನರಿಗೆ ನೀಡಿದ ಉಪಶಮನ ಬಿಡುಗಡೆಯನ್ನು ರದ್ದುಗೊಳಿಸಿ ಅಪರಾಧಿಗಳು ತಮ್ಮ ಜೀವಿತ ಕಾಲವನ್ನು ಸಂಪೂರ್ಣವಾಗಿ ಜೈಲಿನಲ್ಲಿ ಉಗ್ರ ಶಿಕ್ಷೆಯನ್ನು ಅನುಭವಿಸುವಂತೆ ಕ್ರಮವಹಿಸಬೇಕು. ಹಾಗೆಯೇ ರಾಜಸ್ಥಾನದಲ್ಲಿ ಶಾಲೆಯಲ್ಲಿ ಕುಡಿಯುವ ನೀರು ಮುಟ್ಟಿತೆಂದು ಥಳಿಸಿ ದಲಿತ ಸಮುದಾಯದ ಬಾಲಕನನ್ನು ಕೊಂದ ಘಟನೆ ಅತ್ಯಂತ ಬರ್ಭರವಾದದ್ದು ಎಂದು ಗೌರಮ್ಮ ತಿಳಿಸಿದರು.
ದಲಿತರು ದಮನಿತರನ್ನು ಶೋಷಿಸುವ ವ್ಯವಸ್ಥೆಯನ್ನು ನಿರ್ಮೂಲನ ಮಾಡದ ಇದು ಅಮೃತಕಾಲವಲ್ಲ, ನಾವು ಇದನ್ನು ಅತಿ ಉಗ್ರವಾಗಿ ಖಂಡಿಸುತ್ತೇವೆ. ಅಪರಾಧಿಗೆ ಉಗ್ರ ಶಿಕ್ಷೆ ನೀಡಬೇಕೆಂದು ಒತ್ತಾಯಿಸುತ್ತೇವೆ. ಈ ಪ್ರತಿಭಟನೆಯಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ವನಿತಾ, ಗಾಯತ್ರಿ. ಶಶಿಕಲಾ, ಅನಿತಾ, ಡಿವೈಎಫ್‍ಐ ಮುಖಂಡರಾದ ಎಂ.ನಂಜೇಗೌಡ, ಮುನಿಕೃಷ್ಣ, ರವಿಕುಮಾರ್, ವೆಂಕಟೇಶ್ ಭಾಗವಹಿಸಿದ್ದರು.







