ಮಾಲಿನ್ಯಕಾರಕ ಕೈಗಾರಿಕೆಗಳ ಮೇಲೆ ಕ್ರಮ ಜರುಗಿಸಲು ಆಗ್ರಹಿಸಿ ಧರಣಿ: ಮುನೀರ್ ಕಾಟಿಪಳ್ಳ

ಸುರತ್ಕಲ್: ಕೈಗಾರಿಕಾ ಮಾಲಿನ್ಯ ತಡೆಯಲು, ಹಸಿರು ವಲಯ ನಿರ್ಮಿಸಲು ಹಿಂದೇಟು ಹಾಕುತ್ತಿರುವ ಎಂಆರ್ ಪಿ ಎಲ್ ಮೇಲೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ನಾಗರಿಕ ಹೋರಾಟ ಸಮಿತಿ ಜೋಕಟ್ಟೆ ನೇತೃತ್ವದಲ್ಲಿ ಜೋಕಟ್ಟೆ, ಬಜ್ಪೆ, ಸುರತ್ಕಲ್ ಭಾಗದ ಗ್ರಾಮಸ್ಥರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ಎದುರು ಧರಣಿ ನಡೆಸಿದರು.
ಧರಣಿಗೂ ಮುನ್ನ ಮುಂಗಾರು ಬಳಿಯಿಂದ ಜಾಥಾ ನಡೆಸಿದ ಗ್ರಾಮಸ್ಥರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಗೆ ದಿಕ್ಕಾರ ಕೂಗಿದರು.
ಬಳಿಕ ಮಾತನಾಡಿದ ಹೋರಾಟ ಸಮಿತಿಯ ಮುನೀರ್ ಕಾಟಿಪಳ್ಳ, ಎಂಆರ್ಪಿಎಲ್ ಕೋಕ್ - ಸಲ್ಫರ್ ಘಟಕದ ವಿರುದ್ಧ ಹೋರಾಟಕ್ಕಾಗಿ ಕಳೆದ 7-8 ವರ್ಷಗಳ ಹಿಂದೆಯೇ ಹುಟ್ಟಿಕೊಂಡ ಸಂಸ್ಥೆಯಾಗಿದೆ ನಾಗರಿಕ ಹೋರಾಟ ಸಮಿತಿ. ಎಂಆರ್ಪಿಎಲ್, ಎಸ್ಇಝೆಡ್, ಅದಾನಿ ವಿಲ್ಮಾ ರುಚಿ ಗೋಲ್ಡ್ ಸಹಿತ ಬೈಕಂಪಾಡಿ ಕೈಗಾರಿಕಾ ವಲಯ ಹಾಗೂ ಸುತ್ತಲಿರುವ ಕೈಗಾರಿಕೆಗಳು ತಮ್ಮ ಘಟಕಗಳ ಮಾಲಿನ್ಯ ನಿಯಂತ್ರಣಕ್ಕೆ ನಿಯಮಬದ್ಧ ಕ್ರಮಗಳನ್ನು ಜರುಗಿಸದಿರುವುದರಿಂದ ವ್ಯಾಪಕ ಪ್ರಮಾಣದಲ್ಲಿ ಅರಣ್ಯ ಪ್ರದೇಶದಲ್ಲಿ ಪರಿಸರಕ್ಕೆ ಹಾನಿ ಉಂಟಾಗಿದೆ. ಕುಡಿಯುವ ನೀರು, ಉಸಿರಾಡುವ ಗಾಳಿ ಕಲುಷಿತಗೊಂಡಿದೆ ಭೂಮಿ ನದಿ ವಿಷಮಯವಾಗಿದೆ. ಜನರು ಗಂಭೀರ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದೂರುಗಳನ್ನು ನೀಡಿದ್ದರೂ ಯಾವುದೇ ಕ್ರಮಗಳು ಜರುಗಿಸಿಲ್ಲ ಎಂದು ಅವರು ದೂರಿದರು.
ಎಂಆರ್ಪಿಎಲ್ ಮೂರನೇ ಹಂತದ ಕೋಕ್- ಸಲ್ಫರ್ ಘಟಕದಿಂದ ಜೋಕಟ್ಟೆ ಕಳವಾರು ಭಾಗದಲ್ಲಿ ಉಂಟಾಗುತ್ತಿರುವ ಮಾಲಿನ್ಯ ಗ್ರಾಮಸ್ಥರನ್ನು ಬಾಧಿಸುತ್ತಿದೆ. ಈ ಕುರಿತು ರಾಜ್ಯ ಸರಕಾರ ಆರು ಅಂಶಗಳ ಪರಿಹಾರ ಕ್ರಮಗಳನ್ನು ಎಂಆರ್ಪಿಎಲ್ ಸಂಸ್ಥೆ ಜೊತೆ ಚರ್ಚಿಸಿ ಐದು ವರ್ಷಗಳ ಹಿಂದೆಯೇ ಘೋಷಿಸಿತ್ತು. ಆದರೆ ಎಂಆರ್ಪಿಎಲ್ ಪರಿಹಾರ ಕ್ರಮಗಳನ್ನು ಪಾಲಿಸಲು ಹಿಂದೇಟು ಹಾಕುತ್ತಿದೆ ಎಂದು ಅವರು ಆರೋಪಿಸಿದರು.
ಸರಕಾರದ ಆದೇಶದಂತೆ ಘಟಕದ ಒಟ್ಟು ವಿಸ್ತೀರ್ಣದ ಶೇಕಡ 35ರಷ್ಟು ಹಸಿರು ವಲಯವನ್ನು ನಿರ್ಮಿಸಬೇಕು ಆದರೆ ಕಂಪೆನಿ 27 ಎಕರೆ ಹಸಿರು ವಲಯವನ್ನು ನಿರ್ಮಾಣ ಮಾಡಿಲ್ಲ. ಜೋಕಟ್ಟೆ ಕಳವಾರು ಗಡಿಯಲ್ಲಿ ಈ ಹಸಿರು ಪ್ರದೇಶ ನಿರ್ಮಾಣಕ್ಕೆ ಜಮೀನು ಗುರುತಿಸಿ ನೀಡಲಾಗಿದ್ದರೂ ನಿರ್ಲಕ್ಷ್ಯ ವಹಿಸುತ್ತಿದೆ. ಈ ಕುರಿತು ಕೆಐಎಎಡಿಬಿ ಭೂಸ್ವಾಧೀನಕ್ಕೆ ಸಂಬಂಧಿಸಿ ಕಂಪನಿಯನ್ನು ಸಂಪರ್ಕಿಸಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಿಂದಾಗಿ ಜೋಕಟ್ಟೆ ಗ್ರಾಮದಲ್ಲಿ ಅಪಾಯಕಾರಿ ಕೈಗಾರಿಕಾ ಮಾಲಿನ್ಯದಿಂದ ಅಸಹನೀಯ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಎಂಆರ್ಪಿಎಲ್ ಸಹಿತ ಮಾಲಿನ್ಯ ತಡೆಗಟ್ಟಲು ಮುಂದಾಗದ ಪರಿಸರ ನಿಯಮಗಳನ್ನು ಉಲ್ಲಂಘಿಸುತ್ತಿರುವ ಈ ಭಗದ ಕಂಪನಿಗಳಿಗೆ ಬೀಗ ಜಡೀಬೇಕು ಎಂದು ಅವರು ಒತ್ತಾಯಿಸಿದರು. ಮುಂದೆಯೂ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಲಕ್ಷ್ಯತನ ಪ್ರದರ್ಶಿಸಿದರೆ, ಮುಂದಿನ ದಿನಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಎದುರು ಅನಿರ್ದಿಷ್ಟಾವಧಿ ಹೋರಾಟಗಳನ್ನು ರೂಪಿಸಲಾಗುವುದು ಎಂದು ಮುನೀರ್ ಕಾಟಿಪಳ್ಳ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಬಿ ಕೆ ಇಮ್ತಿಯಾಜ್, ಶ್ರೀನಾಥ್ ಕುಲಾಲ್ , ಅಬೂಬಕ್ಕರ್ ಬಾವಾ ಮಾತಾಡಿದರು.
ತಾಲೂಕು ಪಂಚಾಯತ್ ಮಾಜಿ ಸದಸ್ಯ ಬಿ ಎಸ್ ಬಶೀರ್, ತೋಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆವಿನ್ ಫೆರಾವೊ, ಮಾಜಿ ಅಧ್ಯಕ್ಷೆ ಪ್ರೆಸಿಲ್ಲಾ ಮೊಂತೆರೊ, ಸದಸ್ಯೆ ಝುಬೇದಾ, ಮನೋಜ್ ಜೋಕಟ್ಟೆ, ಶ್ರೀನಿವಾಸ್, ಸುರೇಂದ್ರ ಜೋಕಟ್ಟೆ, ಇಕ್ಬಾಲ್ ಜೋಕಟ್ಟೆ, ಚಂದ್ರಶೇಖರ್, ಹನೀಫ್, ಸಿಲ್ವಿಯಾ ಜೋಕಟ್ಟೆ, ಅಮೀನಮ್ಮ, ಶೇಖರ್ ನಿರ್ಮುಂಜೆ, ರಾಜು ಜೋಕಟ್ಟೆ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪ್ರತಿಭಟನೆಗೆ ಮುಂಚಿತವಾಗಿ ಗ್ರಾಮಸ್ಥರು ಮುಂಗಾರು ಬಳಿಯಿಂದ ಮೆರವಣಿಗೆ ನಡೆಸಿದರು.
'ಕ್ಯಾನ್ಸರ್, ಚರ್ಮ ರೋಗಗಳ ಸಹಿತ ಕೈಗಾರಿಕಾ ಮಾಲಿನ್ಯ ಸಂಬಂಧಿಸಿದ ರೋಗಗಳ ವಿಪರೀತ ಏರಿಕೆ':
ತೋಕೂರು, ಕಳವಾರು, ಕೆಂಜಾರು, ಸುರತ್ಕಲ್, ಬಜ್ಪೆ ವ್ಯಾಪ್ತಿಯಲ್ಲಿ ಕ್ಯಾನ್ಸರ್, ಚರ್ಮ ರೋಗಗಳ ಸಹಿತ ಕೈಗಾರಿಕಾ ಮಾಲಿನ್ಯ ಸಂಬಂಧಿಸಿದ ರೋಗಗಳು ವಿಪರೀತವಾಗಿ ಏರಿಕೆ ಕಂಡಿದೆ. ಸುತ್ತಲಿನ ಗ್ರಾಮಗಳ ಜನರ ಆರೋಗ್ಯದ ಸ್ಥಿತಿಗತಿಗಳ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತ್ಯೇಕ ಅಧ್ಯಯನ ನಡೆಸಬೇಕು, ಎಮ್ಆರ್ ಪಿಎಲ್ ಸಹಿತ ನಿಯಮ ಉಲ್ಲಂಘಿಸುವ ಕೈಗಾರಿಕೆಗಳಿಗೆ ಬೀಗ ಜಡಿಯಬೇಕು ಎಂದು ಸಮಿತಿಯ ಪರವಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆಯನ್ನು ನೀಡಿದರು.
ನಮ್ಮ ಜನಪ್ರತಿನಿಧಿಗಳು ಜನರ ಸಮಸ್ಯೆಗಳ ಕುರಿತು ಗಮನವೇ ಹರಿಸುತ್ತಿಲ್ಲ. ಅವರು ಜನರನ್ನು ಜಾತಿ, ಧರ್ಮ, ಸಾವರ್ಕರ್ ಹೀಗೆ ಅನಾವಶ್ಯಕ ವಿಚಾರಗಳಿಗೆ ಹೊಡೆದಾಡಿಸಿಕೊಳ್ಳುತ್ತಿದ್ದಾರೆ. ನಮ್ಮ ಸಂಸದ ನಳಿನ್ ಕುಮಾರ್ ಅವರು ಯಾವುದಕ್ಕೂ ಪ್ರಯೋಜನವಿಲ್ಲ.
ಮುನೀರ್ ಕಾಟಿಪಳ್ಳ, ನಾಗರಿಕ ಹೋರಾಟ ಸಮಿತಿ ಸಂಚಾಲಕ