ಭಾರತ್ ಜೋಡೋ; ರಾಜ್ಯದಲ್ಲಿ 510 ಕಿ.ಮೀ. ಪಾದಯಾತ್ರೆ: ಡಿ.ಕೆ.ಶಿವಕುಮಾರ್

ಬೆಂಗಳೂರು, ಆ.22: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ‘ಭಾರತ್ ಜೋಡೋ’ ಪಾದಯಾತ್ರೆಯ ಮಾರ್ಗದ ವಿಚಾರವಾಗಿ ಚರ್ಚೆ ಮಾಡುತ್ತಿದ್ದು, ರಾಜ್ಯದಲ್ಲಿನ ಪಾದಯಾತ್ರೆಯ ಉಸ್ತುವಾರಿಯನ್ನು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರಿಗೆ ನೀಡಲಾಗಿದೆ. ಜಿಲ್ಲಾ ನಾಯಕರಿಗೆ ಕೆಲವು ಜವಾಬ್ದಾರಿ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸೋಮವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 510 ಕಿ.ಮೀ ದೂರ 21 ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ. ಕೆಲವು ಕಡೆ ಅರಣ್ಯ ಪ್ರದೇಶವಿದ್ದು, ಅಲ್ಲಿ ಪಾದಯಾತ್ರೆ ಮಾಡಬೇಕೆ, ಬೇಡವೆ ಎಂಬ ವಿಚಾರವಾಗಿ ಸ್ಥಳೀಯ ಪೊಲೀಸರ ಜತೆ ಚರ್ಚಿಸಿ ದಿಲ್ಲಿಯ ತಂಡ ತೀರ್ಮಾನಿಸಲಿದೆ ಎಂದರು.
ಸೆ.7ರಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸಮಾಧಿಗೆ ನಮಿಸಿ, ಸಭೆ ನಡೆಸಿ ಕನ್ಯಾಕುಮಾರಿಯಿಂದ ಪಾದಯಾತ್ರೆ ಆರಂಭಿಸಲಾಗುವುದು. ರಾಜ್ಯದಲ್ಲಿ 8 ಜಿಲ್ಲೆಗಳ ಮೂಲಕ ಈ ಪಾದಯಾತ್ರೆ ಸಾಗಲಿದ್ದು, ಬಳ್ಳಾರಿ ಹೊರತಾಗಿ ಚಿತ್ರದುರ್ಗ, ತುಮಕೂರು, ಮಂಡ್ಯ, ಚಾಮರಾಜನಗರ, ಮೈಸೂರು ಜಿಲ್ಲೆಗಳ ಮಾರ್ಗವನ್ನು ಖುದ್ದಾಗಿ ನೋಡಿದ್ದೇನೆ. ಇಡೀ ರಾಜ್ಯದ ಕಾರ್ಯಕರ್ತರು ಹಾಗೂ ಮುಖಂಡರು ಹೆಜ್ಜೆ ಹಾಕಲಿದ್ದಾರೆ ಎಂದು ಅವರು ತಿಳಿಸಿದರು.
ಭಾರತವನ್ನು ಒಗ್ಗೂಡಿಸಲು, ಶಾಂತಿ, ಸೌಹಾರ್ದತೆ ಸ್ಥಾಪಿಸಿ, ಜನರ ಸಮಸ್ಯೆಯನ್ನು ಚರ್ಚೆ ಮಾಡಲು ದೇಶದಾದ್ಯಂತ ಸುಮಾರು 600ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ಸೇರಿ ಚರ್ಚೆ ಮಾಡಿದ್ದಾರೆ. ಅದರಂತೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಗಾಗಿ ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ. ಪಾದಯಾತ್ರೆ ಮಾಡಬೇಕು ಎಂಬ ಸೂಚನೆ ನೀಡಲಾಗಿತ್ತು. ಆದರೆ ನಮ್ಮ ನಾಯಕರು ಜಿಲ್ಲೆಯಲ್ಲಿ ಅಲ್ಲ, ಕ್ಷೇತ್ರದಲ್ಲೇ 200 ಕಿ.ಮೀ. ದೂರ ಪಾದಯಾತ್ರೆ ಮಾಡಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.
ಜಿಲ್ಲಾ ಮಟ್ಟದ ಪಾದಯಾತ್ರೆ ಅವಧಿಯನ್ನು ಆ.30ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನಾವು ಜನರ ಸಮಸ್ಯೆಯನ್ನು ಆಲಿಸುತ್ತಿದ್ದೇವೆ. ಆ.15 ರಂದು ರಾಜ್ಯಮಟ್ಟದಲ್ಲಿ ತಿರಂಗಾ ಯಾತ್ರೆ ಮಾಡಿದ್ದೇವೆ. ಆ ಮೂಲಕ ಉದಯಪುರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದರು.
ಶೀಘ್ರದಲ್ಲೇ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ಕರೆದು ಭಾರತ್ ಜೋಡೋ ಕಾರ್ಯಕ್ರಮದ ವಿಚಾರವಾಗಿ ಚರ್ಚೆ ಮಾಡುತ್ತೇವೆ. ಪಾದಯಾತ್ರೆ ಹಾದು ಹೋಗುವ ಜಿಲ್ಲೆಗಳ ನಾಯಕರನ್ನು ಕರೆದು ಚರ್ಚೆ ಮಾಡುತ್ತೇವೆ. ಸ್ಥಳೀಯರು ಈ ಪಾದಯಾತ್ರೆಯಲ್ಲಿ ಯಾವ ರೀತಿ ಭಾಗವಹಿಸಬೇಕು ಎಂಬ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಅವರು ಹೇಳಿದರು.
ವಿಜಯಪುರದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋ ಹಾಕಿರುವ ವಿಚಾರವಾಗಿ ಬೊಮ್ಮಾಯಿ ಉತ್ತರ ನೀಡಬೇಕು. ರಾಜ್ಯದಲ್ಲಿ ಶಾಂತಿ ಕಾಪಾಡಬೇಕಿರುವುದು ಬೊಮ್ಮಾಯಿ ಅವರ ಜವಾಬ್ದಾರಿ. ನಾವು ಪ್ರಚೋದನಕಾರಿ ಹೇಳಿಕೆ ನೀಡಿ, ಕಾಂಗ್ರೆಸಿಗರನ್ನು ಎತ್ತಿ ಕಟ್ಟಿ, ಕಪ್ಪು ಬಾವುಟ ಹಿಡಿಯಿರಿ ಎಂದು ಹೇಳುವ ಅಗತ್ಯವಿಲ್ಲ ಎಂದು ಶಿವಕುಮಾರ್ ತಿಳಿಸಿದರು.
ಹಳ್ಳಿಗಳಿಗೆ, ನೆರೆ ಪ್ರದೇಶಕ್ಕೆ ಹೋಗಿ ಜನರಿಗೆ ಧ್ವನಿಯಾಗುವುದು ಅವರ ವಿರೋಧ ಪಕ್ಷದ ನಾಯಕರ ಕರ್ತವ್ಯ. ಅದನ್ನು ಮಾಡಬಾರದು, ಮಾಡಿದರೆ ಕಪ್ಪು ಬಾವುಟ ಪ್ರದರ್ಶಿಸುತ್ತೇನೆ, ಮೊಟ್ಟೆ ಹೊಡೆಯುತ್ತೇವೆ ಎನ್ನುವುದು ಸರಿಯಲ್ಲ. ನೀವು ಕೇವಲ ಮೊಟ್ಟೆಯಲ್ಲ, ಏನಾದರೂ ಹೊಡೆಯಿರಿ. ಆದರೆ ಅದೇ ಕೆಲಸವನ್ನು ಬೇರೆ ಪಕ್ಷದವರು ಮಾಡಿದರೆ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಯೋಚಿಸಿ ಎಂದು ಅವರು ಎಚ್ಚರಿಸಿದರು.
ಈ ಸರಕಾರ ದಿನಬೆಳಗಾದರೆ ಭ್ರಷ್ಟಾಚಾರ ಮಾಡುತ್ತಿದ್ದು, ಹೈಕೋರ್ಟ್ ಕೂಡ ಇದನ್ನೇ ಹೇಳಿದೆ. ಇನ್ನು ಸರಕಾರಿ ಶಾಲೆಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಈ ಬಗ್ಗೆ ಧ್ವನಿ ಎತ್ತಬಾರದೇ? ಈ ಸರಕಾರ ಎಲ್ಲರಿಗೂ ರಕ್ಷಣೆ ನೀಡುವುದಾಗಿ ಪ್ರಮಾಣ ಮಾಡಿ, ಈಗ ಒಂದು ವರ್ಗಕ್ಕೆ ಪರಿಹಾರ ನೀಡಿ ಮತ್ತೊಂದು ವರ್ಗಕ್ಕೆ ನೀಡದೇ ಅವರನ್ನು ಪ್ರಚೋದನೆ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಆ.26 ರಂದು ಕೊಡಗು ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುವ ಹೋರಾಟದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಸ್ಪಿ ಕೇವಲ ನೆಪ ಮಾತ್ರ. ಈ ಕಪ್ಪು ಬಾವುಟ ಪ್ರತಿಭಟನೆ ಸರಕಾರದ ಪ್ರಾಯೋಜಿತದಿಂದ ಆಗಿದೆ. ಹೀಗಾಗಿ ಈ ಹೋರಾಟ ಸರಕಾರದ ವಿರುದ್ಧವೇ ಹೊರತು, ಅಧಿಕಾರಿ ವಿರುದ್ಧ ಅಲ್ಲ’ ಎಂದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಉಪಸ್ಥಿತರಿದ್ದರು.







