ಕಾಪು: ಸರ್ವೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಲಾಲಾಜಿ ಮೆಂಡನ್
ನಿಗದಿತ ಕಾಲಮಿತಿಯಲ್ಲಿ ಸಾರ್ವಜನಿಕರ ಕೆಲಸ ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ

ಕಾಪು: ಸಾರ್ವಜನಿಕರು ವಿವಿಧ ಸೇವೆ ಕೋರಿ ಭೂ ಮಾಪನ ಇಲಾಖೆಗೆ ಬಂದ ಸಮಯದಲ್ಲಿ ಎಲ್ಲಾ ಅಧಿಕಾರಿಗಳು ಸೌಜನ್ಯವಾಗಿ ವರ್ತಿಸಿ ನಿಗದಿತ ಕಾಲಮಿತಿ ಒಳಗೆ ಸಾರ್ವಜನಿಕರ ಕೆಲಸ ಮಾಡಿಕೊಡಲು ಅಧಿಕಾರಿಗಳಿಗೆ ಶಾಸಕ ಲಾಲಾಜಿ ಆರ್. ಮೆಂಡನ್ ಸೂಚನೆ ನೀಡಿದರು.
ಅವರು ಸೋಮವಾರ ಶಾಸಕರಾದ ಲಾಲಾಜಿ ಆರ್ ಮೆಂಡನ್‍ರವರು ಸರ್ವೆ ಇಲಾಖೆ ಕಾರ್ಯ ವೈಖರಿ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರ ದೂರಿನ ಅನ್ವಯ ಕಾಪು ತಹಸೀಲ್ದಾರ್ ಕಚೇರಿಯಲ್ಲಿ ಭೂ ಮಾಪನ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದರು.
ಪ್ರಸ್ತುತ 11 ಇ ನಕ್ಷೆ ಕೋರಿ ಸಲ್ಲಿಸಿರುವ ಅರ್ಜಿಗಳು ಹಲವಾರು ತಿಂಗಳುಗಳಿಂದ ವಿಳಂಬವಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರ ನಿರಂತರ ದೂರಿನ ಅನ್ವಯ ಶೀಘ್ರದಲ್ಲಿ ಕ್ರಮ ಕೈಗೊಳ್ಳಲು ಸೂಚಿಸಿದರು.
ಎಫ್‍ಎಂಬಿ ನಕ್ಷೆಗೆ ಅರ್ಜಿ ಸಲ್ಲಿಸಿ ನಕ್ಷೆ ಪಡೆಯಲು ವಿಳಂಬವಾಗುತ್ತಿರುವ ಬಗ್ಗೆ ಸಂಬಂದಿಸಿದ ಅಧಿಕಾರಿಗಳು ಶೀಘ್ರದಲ್ಲಿ ಕ್ರಮ ವಹಿಸಿ ಏಫ್‍ಎಂಬಿ ನಕಲನ್ನು ಯಾವುದೇ ವಿಳಂಬವಿಲ್ಲದೆ ಒದಗಿಸುವ ಬಗ್ಗೆ ಸೂಚನೆ ನೀಡಿದರು.
ಕಾಪು ತಹಸೀಲ್ದಾರ್ ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ಭೂ ದಾಖಲೆಗಳ ಉಪನಿರ್ದೇಶಕರು ರವೀಂದ್ರ, ಸರ್ವೆ ಸೂಪರ್ ವೈಸರ್ ನಾರಾಯಣ, ಕಂದಾಯ ನೀರಿಕ್ಷಕರಾದ ಸುಧೀರ್ ಕುಮಾರ್ ಶೆಟ್ಟಿ, ಶಾಸಕರ ಆಪ್ತ ಕಾರ್ಯದರ್ಶಿ ಪ್ರವೀಣ್ ಕುಮಾರ್, ಭೂ ಮಾಪನ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.