ಸರಕಾರದ ಸೌಲಭ್ಯದ ಸದುಪಯೋಗಕ್ಕೆ ಸಚಿವ ಅಂಗಾರ ಕರೆ
ದೇವರಾಜ ಅರಸು ಜನ್ಮದಿನಾಚರಣೆ ಕಾರ್ಯಕ್ರಮದ ಸಮಾರೋಪ

ಮಂಗಳೂರು, ಆ.22: ಪ್ರತಿಯೊಬ್ಬ ವಿದ್ಯಾರ್ಥಿಯು ಸರಕಾರದ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಬದುಕಿನಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಕರೆ ನೀಡಿದರು.
ದ.ಕ. ಜಿಲ್ಲಾಡಳಿತ, ಜಿಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸೋಮವಾರ ನಡೆದ ದೇವರಾಜ ಅರಸು ಜನ್ಮದಿನಾಚರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಸಮಯವನ್ನು ವ್ಯರ್ಥ ಮಾಡದೆ ಓದಿನಲ್ಲಿ ತಲ್ಲೀನರಾಗಬೇಕು. ಆರ್ಥಿಕವಾಗಿ ಅಥವಾ ಬಡತನದಿಂದಾಗಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಬಾರದು ಎಂಬ ಉದ್ದೇಶದಿಂದ ಸರಕಾರ ವಿದ್ಯಾರ್ಥಿ ನಿಲಯಗಳನ್ನು ತೆರೆದಿದೆ. ಸರ್ಕಾರ ನೀಡುವ ಈ ರೀತಿಯ ಪ್ರೋತ್ಸಾಹದ ಪ್ರಯೋಜನ ಪಡೆದು ವಿದ್ಯಾರ್ಥಿಗಳು ಉತ್ತಮ ಶಿಕ್ಷಣದೊಂದಿಗೆ ಸಾಧಕರಾಗಬೇಕು ಎಂದರು.
ಈ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸಚಿವರು ಸನ್ಮಾನಿಸಿದರು. ವೇದಿಕೆಯಲ್ಲಿ ದ.ಕ.ಜಿಪಂ ಸಿಇಒ ಡಾ.ಕುಮಾರ್ ಉಪಸ್ಥಿತರಿದ್ದರು. ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ರಶ್ಮಿ ಸ್ವಾಗತಿಸಿದರು.










