ಆ.23 ರಂದು ಉಡುಪಿ ಜಿಲ್ಲಾ ಮುದ್ರಣ ಮಾಲಕರ ಸಂಘ ಉದ್ಘಾಟನೆ
ಉಡುಪಿ, ಆ.22: ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಉಡುಪಿ ಜಿಲ್ಲಾ ಮುದ್ರಣ ಮಾಲಕರ ಸಂಘದ ಉದ್ಘಾಟನೆಯು ನಾಳೆ(ಆ.23) ಸಂಜೆ 6:00ಗಂಟೆಗೆ ಉಡುಪಿ ಅಜ್ಜರಕಾಡಿನಲ್ಲಿರುವ ಮಿನಿ ಟೌನ್‌ಹಾಲ್‌ನಲ್ಲಿ ನಡೆಯಲಿದೆ ಎಂದು ಮಾಜಿ ತಾಲೂಕು ಅಧ್ಯಕ್ಷ ಯು.ಮೋಹನ್ ಉಪಾಧ್ಯ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 38 ವರ್ಷಗಳಿಂದ ಇದ್ದ ಉಡುಪಿ ತಾಲೂಕು ಸಂಘಟನೆಯನ್ನು ಇದೀಗ ಜಿಲ್ಲಾ ಸಂಘವಾಗಿ ಮೇಲ್ದರ್ಜೆಗೇರಿಸಲಾಗಿದೆ. ಸಂಘ ಇನ್ನು ಇಡೀ ಜಿಲ್ಲೆಯ ಮುದ್ರಣಾಯಗಳ ಮಾಲಕರ ಪ್ರತಿನಿಧಿಯಾಗಿ ಕೆಲಸ ಮಾಡಲಿದೆ ಎಂದರು.
ಜಿಲ್ಲೆಯಲ್ಲಿ ಸುಮಾರು 300ರಷ್ಟು ಮುದ್ರಣಾಲಯಗಳಿದ್ದು, ಇವುಗಳಲ್ಲಿ ಇದುವರೆಗೆ 180 ಪ್ರೆಸ್‌ಗಳ ಮಾಲಕ ಸಂಘದ ಸದಸ್ಯತ್ವ ಪಡೆದಿದ್ದಾರೆ.
ಸಂಘಟನೆಯನ್ನು ಐದು ವಲಯಗಳಾಗಿ ವಿಂಗಡಿಸಲಾಗಿದೆ. ಮುದ್ರಣ ಮಾಲಕರು ಹಾಗೂ ಸಿಬ್ಬಂದಿಗಳ ಪರವಾಗಿ ನಾವು ಕೆಸ ಮಾಡುತ್ತೇವೆ ಎಂದರು.
ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಮಾತನಾಡಿ, ಎರಡು ವರ್ಷಗಳ ಕೊರೋನಾದಿಂದಾಗಿ ಉದ್ಯಮ ತುಂಬಾ ಸಂಕಷ್ಟಕ್ಕೀಡಾಗಿದೆ. ಬಹಳಷ್ಟು ಮುದ್ರಣ ಸಂಸ್ಥೆ ಮುಚ್ಚಿವೆ. ಇತ್ತೀಚಿನ ದಿನಗಳಲ್ಲಿ ಪೇಪರ್, ಇಂಕ್ ಸೇರಿದಂತೆ ಕಚ್ಛಾ ಮುದ್ರಣ ಸಮಾಗ್ರಿಗಳ ಬೆಲೆ ಗಗನಕ್ಕೇರಿವೆ. ಹೀಗಾಗಿ ನಾವು ಮುದ್ರಣದ ಬೆಲೆಯನ್ನು ಶೇ.20ರಷ್ಟು ಹೆಚ್ಚಿಸಲು ನಿರ್ಧರಿಸಿದ್ದೇವೆ. ಇನ್ನು ಮುಂದೆ ಇಡೀ ಜಿಲ್ಲೆಯಾದ್ಯಂತ ಒಂದೇ ಬೆಲೆ ಪಟ್ಟಿ ಇರುತ್ತದೆ. ಗ್ರಾಹಕರು ಸಹಕರಿಸಬೇಕು ಎಂದವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಮನ್ವಯ ಸಮಿತಿಯ ಸಂಚಾಲಕ ಎಂ.ಮಹೇಶ್ ಕುಮಾರ್, ರಾಜ್ಯ ಸಹ ಸಂಚಾಲಕ ಅಶೋಕ್ ಶೆಟ್ಟಿ, ಮಾಜಿ ಅಧ್ಯಕ್ಷ ರಮೇಶ್ ತಿಂಗಳಾಯ, ಕಾರ್ಯದರ್ಶಿ ಶರೀಫ್ ಉಪಸ್ಥಿತರಿದ್ದರು.







