ಇಮ್ರಾನ್ ಖಾನ್ ರನ್ನು ಬಂಧಿಸಿ ʼಕೆಂಪು ಗೆರೆ' ದಾಟಬೇಡಿ: ಪಾಕ್ ವಿಪಕ್ಷಗಳ ಎಚ್ಚರಿಕೆ

ಇಸ್ಲಮಾಬಾದ್, ಆ.೨೨: ನ್ಯಾಯಾಂಗದ ವಿರುದ್ಧ ಟೀಕೆ ಮಾಡಿರುವ ಆರೋಪದಲ್ಲಿ ಭಯೋತ್ಪಾದನ ನಿಗ್ರಹ ಕಾಯ್ದೆಯಡಿ ಎಫ್ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನ್ನು ಅಧಿಕಾರಿಗಳು ಬಂಧಿಸಿದರೆ ಕೆಂಪು ಗೆರೆಯನ್ನು ದಾಟಿದಂತಾಗುತ್ತದೆ ಎಂದು ಪಾಕಿಸ್ತಾನದ ವಿಪಕ್ಷಗಳು ಎಚ್ಚರಿಕೆ ನೀಡಿವೆ.
ಇಮ್ರಾನ್ ಬಂಧನದ ಸಾಧ್ಯತೆಯಿದೆ ಎಂಬ ವರದಿಯ ಹಿನ್ನೆಲೆಯಲ್ಲಿ, ಪೊಲೀಸರು ಅವರನ್ನು ತಲುಪದಂತೆ ತಡೆಯಲು ನೂರಾರು ಬೆಂಬಲಿಗರು ಸೋಮವಾರ ಇಮ್ರಾನ್ ಮನೆಯ ಎದುರು ಜಮಾಯಿಸಿದ್ದರು. `ನೀವು ಎಲ್ಲಿಯೇ ಇದ್ದರೂ ತಕ್ಷಣ ಬನಿಗಾಲಾಕ್ಕೆ (ಇಮ್ರಾನ್ ನಿವಾಸ) ಆಗಮಿಸಿ ಇಮ್ರಾನ್ರೊಂದಿಗೆ ಒಗ್ಗಟ್ಟು ಪ್ರದರ್ಶಿಸಿ. ಇಮ್ರಾನ್ ನಮ್ಮ ಕೆಂಪು ಗೆರೆ. ಅದನ್ನು ಅಧಿಕಾರಿಗಳು ದಾಟಬಾರದು ' ಎಂದು ಮಾಜಿ ಸಚಿವ ಫವಾದ್ ಚೌಧರಿ ಟ್ವೀಟ್ ಮಾಡಿದ್ದಾರೆ.
ಇಮ್ರಾನ್ ವಿರುದ್ಧ ರವಿವಾರ ಪೊಲೀಸರು ಎಫ್ಐಆರ್ ದಾಖಲಿಸಿದ್ದು ಇದು ಬಂಧನಕ್ಕೆ ಕಾರಣವಾಗುವ ಪ್ರಕ್ರಿಯೆಯ ಆರಂಭಿಕ ಹಂತವಾಗಿದೆ. ಇಮ್ರಾನ್ ವಿರುದ್ಧದ ಆರೋಪ ಅತ್ಯಂತ ಕ್ಷುಲ್ಲಕ ಎಂದು ಇಮ್ರಾನ್ ಅವರ ಪಿಟಿಐ ಪಕ್ಷ ಆರೋಪಿಸಿದೆ. ದೇಶದಲ್ಲಿ ಮತ್ತಷ್ಟು ಅಸ್ಥಿರತೆಗೆ ಕಾರಣವಾಗುವ ರಾಜಕೀಯ ಪ್ರೇರಿತ ಕ್ರಮವನ್ನು ತೀವ್ರ ಖಂಡಿಸುತ್ತೇವೆ ಎಂದು ಪಕ್ಷದ ಮುಖಂಡರು ಟ್ವೀಟ್ ಮಾಡಿದ್ದಾರೆ. ಕಳೆದ ವಾರ ದೇಶದ್ರೋಹದ ಆರೋಪದ ಮೇಲೆ ಬಂಧಿಸಲ್ಪಟ್ಟ ತನ್ನ ಆಪ್ತ ಶಹಬಾಝ್ ಗಿಲ್ರನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆ ಎಂದು ಇಮ್ರಾನ್ ಆಕ್ರೋಶ ವ್ಯಕ್ತಪಡಿಸಿದ್ದರು ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು, ಮಹಿಳಾ ಮ್ಯಾಜಿಸ್ಟ್ರೇಟ್, ಪಾಕಿಸ್ತಾನದ ಚುನಾವಣಾ ಆಯೋಗದ ವಿರುದ್ಧ ಪ್ರಕರಣ ದಾಖಲಿಸುವುದಾಗಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಇಮ್ರಾನ್ಖಾನ್ ಎಚ್ಚರಿಸಿದ್ದರು.
ಇಮ್ರಾನ್ ಗೆ ಬಂಧನದಿಂದ ತಾತ್ಕಾಲಿಕ ವಿನಾಯತಿ
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ಖಾನ್ಗೆ ಆಗಸ್ಟ್ ೨೫ರವರೆಗೆ ಬಂಧನದಿAದ ವಿನಾಯತಿ ನೀಡಿ ಇಸ್ಲಮಾಬಾದ್ ಹೈಕೋರ್ಟ್ ಸೋಮವಾರ ಆದೇಶ ಜಾರಿಗೊಳಿಸಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಮ್ಯಾಜಿಸ್ಟ್ರೇಟ್ ಆಲಿ ಜಾವೆದ್ ಇಸ್ಲಮಾಬಾದ್ ನ ಮಾರ್ಗಲ್ಲ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನ ಹಿನ್ನೆಲೆಯಲ್ಲಿ ಇಮ್ರಾನ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು ಮತ್ತು ಅವರನ್ನು ಬಂಧಿಸುವ ಸಾಧ್ಯತೆ ದಟ್ಟವಾಗಿತ್ತು.
ಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಇಮ್ರಾನ್ ಖಾನ್ ಇಸ್ಲಾಮಾಬಾದ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಆಗಸ್ಟ್ ೨೫ರವರೆಗೆ ತಾತ್ಕಾಲಿಕ ಜಾಮೀನು ಮಂಜೂರುಗೊಳಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.