ಸನ್ಮಾರ್ಗ ವಾರ ಪತ್ರಿಕೆಯ ಪ್ರಕಾಶಕ, ಹಿರಿಯ ಲೇಖಕ ಎಂ. ಸಾದುಲ್ಲಾ ನಿಧನ

ಎಂ. ಸಾದುಲ್ಲಾ
ಮಂಗಳೂರು: ಸನ್ಮಾರ್ಗ ವಾರಪತ್ರಿಕೆಯ ಪ್ರಕಾಶಕ, ಹಿರಿಯ ಪತ್ರಕರ್ತ, ಅನುವಾದಕ, ಲೇಖಕ, ಜಮಾಅತೆ ಇಸ್ಲಾಮೀ ಹಿಂದ್ನ ಹಿರಿಯ ಸದಸ್ಯ ಎಂ.ಸಾದುಲ್ಲಾ (76) ಸೋಮವಾರ ರಾತ್ರಿ ತನ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ ಮತ್ತು ನಾಲ್ಕು ಮಂದಿ ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸೌಮ್ಯ ಸ್ವಭಾವದ, ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಅವರು ಮಿತಭಾಷಿಯಾಗಿದ್ದರು. ಕೆಲವು ಸಮಯದಿಂದ ಅನಾರೋಗ್ಯದಿಂದಿದ್ದ ಅವರು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಲೇಖಕರಾಗಿ, ಅನುವಾದಕರಾಗಿ, ಕವಿಯಾಗಿ, ಚಿಂತಕರಾಗಿ, ಸಂಘಟಕರಾಗಿಯೂ ಚಿರಪರಿಚಿತರಾಗಿದ್ದರು.
‘ಸನ್ಮಾರ್ಗ’ ಪತ್ರಿಕೆಯೊಂದಿಗೆ ಗುರುತಿಸಿಕೊಂಡಿದ್ದ ಎಂ. ಸಾದುಲ್ಲಾ, ಆರಂಭದಿಂದಲೇ ಅದರ ಪ್ರಕಾಶಕರಾಗಿ ಮತ್ತು ವ್ಯವಸ್ಥಾಪಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು. ಕುರ್ಆನ್ ಅನ್ನು ಆಳವಾಗಿ ಅಧ್ಯಯನ ನಡೆಸಿದ್ದ ಅವರು ಅನುವಾದದಲ್ಲಿ ತುಂಬಾ ನೈಪುಣ್ಯತೆ ಹೊಂದಿದ್ದರು. ತಫ್ಹೀಮುಲ್ ಕುರ್ಆನ್, ಸಹೀಹ್ ಬುಖಾರಿ ಮತ್ತಿತರ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಉರ್ದುವಿನ ಅನೇಕ ಕೃತಿಗಳನ್ನು ಕೂಡ ಕನ್ನಡಕ್ಕೆ ಅನುವಾದಿಸಿದ್ದರು. ಶಾಂತಿ ಪ್ರಕಾಶನದ ಟ್ರಸ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ದಾರಿದೀಪ, ಹದೀಸ್ ಗ್ರಂಥ ಅನುವಾದ ಸಹಿತ ಹಲವು ಕೃತಿಗಳನ್ನು ಕೂಡ ಬರೆದಿದ್ದಾರೆ.
ಮುಸ್ಲಿಂ ಲೇಖಕರ ಸಂಘದ ಕೋಶಾಧಿಕಾರಿಯಾಗಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಬೆಂಗರೆಯ ಎಆರ್ಕೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ, ಕುದ್ರೋಳಿಯ ಇಸ್ಲಾಮಿಯಾ ಮದ್ರಸದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಮಂಗಳವಾರ ಮಧ್ಯಾಹ್ನ 12:30ರವರೆಗೆ ಮಂಗಳೂರಿನ ಬಂದರ್ ಕಂದಕ್ ಮೂರನೇ ಕ್ರಾಸ್ ರಸ್ತೆಯಲ್ಲಿರುವ ಕುಟುಂಬದ ಮೂಲಮನೆ ‘ಇಜ್ಜಬ್ಬ ಹೌಸ್’ನಲ್ಲಿ ಮೃತರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಬಂದರ್ನ ಝೀನತ್ ಬಕ್ಷ್ ಜುಮಾ ಮಸ್ಜಿದ್ ಆವರಣದಲ್ಲಿ ದಫನ ಕಾರ್ಯ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.