ತೈವಾನ್ ಗೆ ಅಮೆರಿಕದ ಗವರ್ನರ್ ಭೇಟಿ

ತೈಪೆ, ಆ.೨೨: ತೈವಾನ್ಗೆ ಬೆಂಬಲ ಮುಂದುವರಿಸುವ ನಿಟ್ಟಿನಲ್ಲಿ ಆ ದೇಶದೊಂದಿಗೆ ವ್ಯಾವಹಾರಿಕ ಮಾತುಕತೆ ನಡೆಸಲಾಗುವುದು ಎಂದು ಅಮೆರಿಕ ಘೋಷಿಸಿದ ಬೆನ್ನಲ್ಲೇ ಅಲ್ಲಿನ ಇಂಡಿಯಾನಾ ರಾಜ್ಯದ ಗವರ್ನರ್ ಎರಿಕ್ ಹಾಲ್ಕಂಬ್ ರವಿವಾರ ತೈವಾನ್ಗೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ.
ಆರ್ಥಿಕ ಅಭಿವೃದ್ಧಿ ಪ್ರವಾಸದ ಅಂಗವಾಗಿ ಎರಿಕ್ ಹಾಲ್ಕಂಬ್ ತೈವಾನ್ಗೆ ಆಗಮಿಸಿ ಅಧ್ಯಕ್ಷೆ ತ್ಸಾಯ್ ಇಂಗ್ವೆನ್ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಸಂದರ್ಭ ತೈವಾನ್ ಜಲಸಂಧಿಯಲ್ಲಿ ಚೀನಾ ನಡೆಸುತ್ತಿರುವ ಸಮರಾಭ್ಯಾಸದ ಬಗ್ಗೆ ನೇರವಾಗಿ ಪ್ರಸ್ತಾವಿಸಿದ ತ್ಸಾಯ್ ಇಂಗ್ವೆನ್, ಸಮಾನ ಮನಸ್ಕ ದೇಶಗಳು ತೈವಾನ್ಗೆ ಬೆಂಬಲ ನೀಡುವುದನ್ನು ಮುಂದುವರಿಸಬೇಕು ಎಂದು ಕರೆ ನೀಡಿದರು.
ಪ್ರಸ್ತುತ ನಾವು ಜಾಗತಿಕ ಸರ್ವಾಧಿಕಾರದ ಮುಂದುವರಿದ ವಿಸ್ತರಣೆಯನ್ನು ಎದುರಿಸುತ್ತಿದ್ದೇವೆ. ತೈವಾನ್ ಜಲಸಂಧಿಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಚೀನಾದಿಂದ ತೈವಾನ್ ಮಿಲಿಟರಿ ಬೆದರಿಕೆಗಳನ್ನು ಎದುರಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ಪ್ರಜಾಸತ್ತಾತ್ಮಕ ಮಿತ್ರರು ಒಟ್ಟಾಗಿ ನಿಲ್ಲಬೇಕು ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಬೇಕು ಎಂದು ತೈವಾನ್ ಅಧ್ಯಕ್ಷೆ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹಾಲ್ಕಂಬ್, ಅಮೆರಿಕ ಮತ್ತು ತೈವಾನ್ ಹಲವು ಸಾಮಾನ್ಯ ಮೌಲ್ಯಗಳು ಮತ್ತು ಆಸಕ್ತಿಯನ್ನು ಹಂಚಿಕೊಂಡಿವೆ. ತೈವಾನ್ ಜತೆ ಉತ್ತಮ ಕಾರ್ಯತಂತ್ರದ ಪಾಲುದಾರಿಕೆ ಪ್ರಾರಂಭಿಸುವ ಪ್ರಯತ್ನ ಮುಂದುವರಿಯಲಿದೆ ಎಂದರು.







