ಮರಳು ಗಣಿಗಾರಿಕೆಯನ್ನು ಮುಕ್ತಗೊಳಿಸುವ ಅಗತ್ಯವಿದೆ: ಸಿಎಂ ಬೊಮ್ಮಾಯಿ
ಗಣಿಗಳ ಆಧುನೀಕರಣಕ್ಕೆ ಉನ್ನತ ಮಟ್ಟದ ಸಮಿತಿ ರಚನೆ

ಬೆಂಗಳೂರು, ಆ. 22: ಗಣಿಗಳ ಆಧುನೀಕರಣಕ್ಕೆ ಉನ್ನತ ಮಟ್ಟದ ಸಮಿತಿಯನ್ನು ಮುಖ್ಯಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಚಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಸೂಚಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ವಿವಿಧ ದೇಶಗಳಲ್ಲಿ ಗಣಿಗಾರಿಕೆಯ ಪರಿಕಲ್ಪನೆ, ಯಂತ್ರೋಪಕರಣ ಹಾಗೂ ಖನಿಜಾನ್ವೇಷಣೆಯಲ್ಲಿ ಆಧುನೀಕರಣವಾಗಿದೆ. ಈ ನಿಟ್ಟಿನಲ್ಲಿ ಸಮಿತಿ ಗಂಭೀರವಾಗಿ ಚಿಂತನೆ ನಡೆಸಿ ರೂಪುರೇಷೆಗಳನ್ನು ಸಿದ್ಧಪಡಿಸುವಂತೆ ಮುಖ್ಯಮಂತ್ರಿಗಳು ತಿಳಿಸಿದರು.
ಮರಳು ನೀತಿ: ಬಡವರು ಮತ್ತು ಮಧ್ಯಮವರ್ಗದವರಿಗೆ ಸಹಾಯವಾಗುವಂತೆ ಮರಳು ನೀತಿಯನ್ನು ತಿದ್ದುಪಡಿ ಮಾಡುವಂತೆ ಮುಖ್ಯಮಂತ್ರಿಗಳು ತಿಳಿಸಿದರು. ಕೆಲವರ ಕೈಯಲ್ಲಿರುವ ಮರಳು ಗಣಿಗಾರಿಕೆಯನ್ನು ಮುಕ್ತಗೊಳಿಸುವ ಅಗತ್ಯವಿದೆ ಎಂದರು.
ಸಭೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ಹಾಲಪ್ಪ ಆಚಾರ, ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಎಂಎಸ್‍ಎಂಈ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.







