ನಾಲ್ಕು ದಶಕಗಳಲ್ಲಿ ಆಗದ ಅಭಿವೃದ್ಧಿ ನಾಲ್ಕು ವರ್ಷಗಳಲ್ಲಿ ಆಗಿದೆ: ಸಂಸದ ನಳಿನ್ ಕುಮಾರ್

ಬಂಟ್ವಾಳ, ಆ. 23: ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ದಶಕಗಳಲ್ಲಿ ಆಗದ ಅಭಿವೃದ್ಧಿ ಕಾಮಗಾರಿಗಳು, ಶಾಸಕ ರಾಜೇಶ್ ನಾಯ್ಕ್ ಶಾಸಕತ್ವದ ನಾಲ್ಕು ವರ್ಷಗಳಲ್ಲಿ ಅನುಷ್ಠಾನಗೊಂಡಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ, ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಶ್ರೀ ಕ್ಷೇತ್ರ ಪೊಳಲಿಯಲ್ಲಿ 40 ಲಕ್ಷ ರೂ. ವೆಚ್ಚದ ಒಳಚರಂಡಿ, 10 ಲಕ್ಷ ರೂ. ವೆಚ್ಚದ ಶ್ರೀ ರಾಮಕೃಷ್ಣ ತಪೋವನ ಸಂಪರ್ಕ ರಸ್ತೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ 28 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಂಟ್ವಾಳ ಕ್ಷೇತ್ರದಲ್ಲಿ ಮುಂದೆಯೂ ನಗರದ ಒಳಚರಂಡಿ ವ್ಯವಸ್ಥೆ, ಜೆಜೆಎಂ ಮೂಲಕ ಮನೆಮನೆಗೆ ಕುಡಿಯುವ ನೀರು, ಬಹುಗ್ರಾಮ ಯೋಜನೆಯೂ ಕಾರ್ಯಗತ ಗೊಳ್ಳಲಿದೆ. ಈ ಮೂಲಕ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಗ್ರ ಅಭಿವೃದ್ಧಿ ಎಂದರು.
ಅಭಿವೃದ್ಧಿ ಜೊತೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮಹತ್ಕಾರ್ಯ ಇವರ ಅವಧಿಯಲ್ಲಿ ನಡೆದಿದೆ ಎಂದು ಅವರು ಹೇಳಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ನನ್ನ ಅವಧಿಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ 1,400 ರಸ್ತೆ ಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು ಯೋಜನೆ ಅನುಷ್ಠಾನಗೊಳ್ಳುವ ಸಂದರ್ಭದಲ್ಲಿ ಜನರ ಸಹಭಾಗಿತ್ವ ಅತ್ಯಗತ್ಯವಾಗಿದೆ. ಕಾಮಗಾರಿ ಅನುಷ್ಠಾನದ ವೇಳೆ ಉತ್ತಮ ಗುಣಮಟ್ಟಕ್ಕಾಗಿ ಜನರ ಸಲಹೆ ಸೂಚನೆಗಳು ಅತೀ ಅಗತ್ಯ. ಯಾವುದೇ ಭಷ್ಟಾಚಾರಕ್ಕೆ ಅವಕಾಶ ನೀಡದೆ ಕಾಮಗಾರಿ ಅನುಷ್ಠಾನಗೊಳಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರುಕ್ಮಯ ಪೂಜಾರಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಸುಲೋಚನಾ ಜಿಕೆ.ಭಟ್, ರವೀಂದ್ರ ಕಂಬಳಿ, ಕಮಲಾಕ್ಷಿ ಕೆ.ಪೂಜಾರಿ, ತುಂಗಪ್ಪ ಬಂಗೇರ,ಡೊಂಬಯ್ಯ ಅರಳ, ರವೀಶ್ ಶೆಟ್ಟಿ, ಗಣೇಶ್ ಸುವರ್ಣ, ವೆಂಕಟೇಶ್ ನಾವುಡ, ಯಶವಂತ ಪೂಜಾರಿ, ರಾಮದಾಸ ಬಂಟ್ವಾಳ, ಸೋಮಪ್ಪ ಕೋಟ್ಯಾನ್, ಪ್ರಭಾಕರ ಪ್ರಭು, ರತ್ನ ಕುಮಾರ್ ಚೌಟ ಮೊದಲಾದವರಿದ್ದರು.







