ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಬಿಡುಗಡೆ:ಪ್ರಶ್ನಿಸಿದ ಪಿಐಎಲ್ ವಿಚಾರಣೆಗೆ ಪರಿಶೀಲಿಸಲು ಸುಪ್ರೀಂ ಸಮ್ಮತಿ

ಹೊಸದಿಲ್ಲಿಆ.24: ಬಿಲ್ಕಿಸ್ ಬಾನೊ ಪ್ರಕರಣದ ಎಲ್ಲಾ ಅಪರಾಧಿಗಳ ಜೈಲು ಶಿಕ್ಷೆಯನ್ನು ರದ್ದುಪಡಿಸಿದ ಗುಜರಾತ್ ಸರಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂಕೋರ್ಟ್ ಮಂಗಳವಾರ ಸಮ್ಮತಿಸಿದೆ.
ಸಿಪಿಎಂ ಸದಸ್ಯ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲಾವುಲ್ ಹಾಗೂ ಪ್ರೊಫೆಸರ್ ರೂಪ ರೇಖಾ ವರ್ಮಾ ಅವರ ಪರವಾಗಿ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಹಾಗೂ ನ್ಯಾಯವಾದಿ ಅಪರ್ಣಾ ಭಟ್ ಪಿಐಎಲ್ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
‘‘14 ಮಂದಿಯ ಹತ್ಯೆ ಪ್ರಕರಣದ ಅಪರಾಧಿಗಳ ಜೈಲು ಶಿಕ್ಷೆಯನ್ನು ರದ್ದುಪಡಿಸಿರುವುದನ್ನು ನಾವು ಪ್ರಶ್ನಿಸುತ್ತಿದ್ದೇವೆ. ಈ ಅಪರಾಧಿಗಳಿಗೆ ಯಾವ ಸಿದ್ಧಾಂತಗಳ ಆಧಾರದಲ್ಲಿ ಕ್ಷಮಾದಾನ ನೀಡಲಾಯಿತೆಂಬುದನ್ನು ನಾವು ಪ್ರಶ್ನಿಸುತ್ತಿದ್ದೇವೆ. ಈ ಪ್ರಕರಣದಲ್ಲಿ ಗರ್ಭಿಣಿ ಮಹಿಳೆಯನ್ನು ಅತ್ಯಾಚಾರಗೈಯಲಾಗಿತ್ತು ಹಾಗೂ 14 ಮಂದಿಯನ್ನು ಹತ್ಯೆಗೈಯಲಾಗಿತ್ತು ಎಂದು ಕಪಿಲ್ ಸಿಬಲ್ ನ್ಯಾಯಾಲಯದಲ್ಲಿ ವಾದಿಸಿದ್ದಾರೆ.
ಬಿಲ್ಕಿಸ್ ಬಾನು ಪ್ರಕರಣದ 11 ಮಂದಿ ಆರೋಪಿಗಳನ್ನು ಬಿಡುಗಡೆಗೊಳಿಸಿರುವ ಗುಜರಾತ್ ಸರಕಾರದ ಆದೇಶವನ್ನು ಬದಿಗೊತ್ತಿ, ಅವರನ್ನು ಕೂಡಲೇ ಮರುಬಂಧಿಸಬೇಕು ಎಂದು ಇನ್ನೋರ್ವ ನ್ಯಾಯವಾದಿ ಅಪರ್ಣಾ ಭಟ್ ವಾದಿಸಿದರು.
ಅರ್ಜಿದಾರ ಪರ ವಕೀಲರ ವಾದವನ್ನು ಅಲಿಸಿದ ಭಾರತದ ಮುಖ್ಯನ್ಯಾಯಮೂರ್ತಿಯವರು ‘‘ ನಾವು ಪರಿಶೀಲಿಸಲಿದ್ದೇವೆ’’ ಎಂದರು.
ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲ್ಪಟ್ಟಿದ್ದ 11 ಮಂದಿ ಅಪರಾಧಿಗಳಾದ ಜಸ್ವಂತ್ ನೈ, ಶೈಲೇಶ್ ಭಟ್, ರಾಧೆಶ್ಯಾಮ್ ಶಾ, ಬಿಪಿನ್‌ಚಂದ್ರ ಜೋಶಿ, ಕೇಸರ್‌ಭಾಯಿ ವೊಹಾನಿಯಾ, ಪ್ರದೀಪ್ ಮೋರ್ದಿಯಾ, ಬಾಕಾಭಾಯ್ ವೊಹಾನಿಯಾ, ರಾಜುಭಾಯ್ ಸೋನಿ, ಮಿತೇಶ್ ಭಟ್ ಹಾಗೂ ರಮೇಶ್‌ಚಂದ್ರ ಅವರಿಗೆ ಗುಜರಾತ್ ಸರಕಾರವು ಕ್ಷಮಾದಾನ ನೀಡಿ, ಆಗಸ್ಟ್ 15ರಂದು ಬಿಡುಗಡೆಗೊಳಿಸಿತ್ತು.
‘‘ ಸರಿಯಾಗಿ ಯೋಚಿಸುವ ಯಾವುದೇ ಆಡಳಿತವು ಇಂತಹ ಹೇಯ ಕೃತ್ಯಗಳಲ್ಲಿ ಶಾಮೀಲಾಗಿರುವವರ ಜೈಲು ಶಿಕ್ಷೆಯನ್ನು ರದ್ದುಪಡಿಸುವುದು ಸೂಕ್ತವೆಂದು ಪರಿಗಣಿಸದು ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
‘‘ಈ ಅಪರಾಧಿಗಳ ಜೈಲು ಶಿಕ್ಷೆಯನ್ನು ರದ್ದುಪಡಿಸುವ ಬಗ್ಗೆ ಪರಿಶೀಲನೆ ನಡೆಸಲು ರಚನೆಯಾದ ಸಮಿತಿಯಲ್ಲಿರುವ ಸದಸ್ಯರು ಒಂದು ನಿರ್ದಿಷ್ಟ ಪಕ್ಷಕ್ಕೆ ಸೇರಿದವರಾಗಿದ್ದಾರೆ ಹಾಗೂ ಹಾಲಿ ಶಾಸಕರಾಗಿದ್ದಾರೆ ಮತ್ತು ಸಮಿತಿಯು ತಾನಾಗಿಯೇ ನಿರ್ಧಾರಗಳನ್ನು ಕೈಗೊಳ್ಳುವಷ್ಟು ಸ್ವತಂತ್ರವಾಗಿರಲಿಲ್ಲವೆಂಬಂತೆ ಕಂಡುಬರುತ್ತಿದೆಯೆಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಮಹುವಾ ಮೊಯಿತ್ರಾರಿಂದಲೂ ಪಿಐಎಲ್
ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಜೈಲು ಶಿಕ್ಷೆಯನ್ನು ರದ್ದುಪಡಿಸಿದ ಗುಜರಾತ್ ಸರಕಾರದ ಆದೇಶವನ್ನು ಪ್ರಶ್ನಿಸಿ ಟಿಎಂಸಿ ಸಂಸದೆ, ಮಹುವಾ ಮೊಯಿತ್ರಾ ಕೂಡಾ ಪ್ರತ್ಯೇಕವಾಗಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳನ್ನು ಸಲ್ಲಿಸಿದ್ದಾರೆಂದು ‘ಲೈವ್ ಲಾ’ ಕಾನೂನು ಸುದ್ದಿಜಾಲತಾಣ ಮಂಗಳವಾರ ವರದಿ ಮಾಡಿದೆ.
ಮೊಯಿತ್ರಾ ಅವರು ಖ್ಯಾತ ನ್ಯಾಯವಾದಿ ಶಾದಾನ್ ಫರ್ಸಾತ್ ಅವರ ಮೂಲಕ ಪಿಐಎಲ್ ಅರ್ಜಿ ಸಲ್ಲಿಸಿದ್ದಾರೆ.







