ಶಾಸಕರಿಗೆ 5 ಕೋ.ರೂ. ಆಮಿಷ ಒಡ್ಡಿ ಕೇಜ್ರಿವಾಲ್ ಸರಕಾರ ಕೆಡವಲು ಬಿಜೆಪಿ ಪ್ರಯತ್ನಿಸುತ್ತಿದೆ: ಆಪ್ ಆರೋಪ

ಹೊಸದಿಲ್ಲಿ: ತನ್ನ ಶಾಸಕರಿಗೆ 5 ಕೋಟಿ ರೂ. ಆಮಿಷ ಒಡ್ಡಿ ದಿಲ್ಲಿಯಲ್ಲಿ ಅರವಿಂದ ಕೇಜ್ರಿವಾಲ್ ಸರಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಇಂದು ಆರೋಪಿಸಿದೆ.
"ನಮ್ಮ ಶಾಸಕರಿಗೆ 5 ಕೋಟಿ ರೂ. ಆಮಿಷ ಒಡ್ಡಲಾಗಿದೆ. ನಮ್ಮ ಸರಕಾರವನ್ನು ಉರುಳಿಸುವ ಬಿಜೆಪಿಯ ಪ್ರಯತ್ನವನ್ನು ನಾವು ಸೋಲಿಸಿದ್ದೇವೆ" ಎಂದು ಹೇಳಿರುವ ಎಎಪಿ ನಾಯಕ ಸೌರಭ್ ಭಾರದ್ವಾಜ್ ( AAP leader Saurabh Bharadwaj)ಅವರು ದಿಲ್ಲಿಯಲ್ಲಿ ಬಿಜೆಪಿಯ "ಆಪರೇಷನ್ ಕಮಲ" ದ ವಿಡಿಯೋ ಪುರಾವೆಯನ್ನು ಪ್ರದರ್ಶಿಸಿದರು.
ತನ್ನ ವಿರುದ್ಧದ ತನಿಖೆಗಳನ್ನು ಕೈಬಿಟ್ಟು ತನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಪ್ರಸ್ತಾಪದೊಂದಿಗೆ ಬಿಜೆಪಿಯು ತನ್ನನ್ನು ಪಕ್ಷಾಂತರ ಮಾಡಲು ಒತ್ತಾಯಿಸಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪದ ಬೆನ್ನಿಗೇ ಆಪರೇಶನ್ ಕಮಲದ ವೀಡಿಯೊವನ್ನು ಎಎಪಿ ಬಿಡುಗಡೆ ಮಾಡಿದೆ.
"ಚುನಾವಣೆಯಲ್ಲಿ ಮತದಾರರು ಮತ್ತೊಂದು ಪಕ್ಷವನ್ನು ಆಯ್ಕೆ ಮಾಡಿದ ಕ್ಷಣದಲ್ಲಿ, ಬಿಜೆಪಿ ಅದರ ನಿರ್ಗಮನದ ಸಂಚು ಆರಂಭಿಸುತ್ತದೆ. ಆ ಯೋಜನೆಯನ್ನು ಆಪರೇಷನ್ ಕಮಲ ಎಂದು ಕರೆಯಲಾಗುತ್ತದೆ. ನಾವು ಅದನ್ನು ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರದಲ್ಲಿ ನೋಡಿದ್ದೇವೆ. ಅವರು(ಬಿಜೆಪಿ) ಮನೀಶ್ ಜಿಗೆ ನೀವು ಬಿಜೆಪಿಗೆ ಬನ್ನಿ, ನಾವು ನಿಮ್ಮನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಅವರು ಅರವಿಂದ ಕೇಜ್ರಿವಾಲ್ ಸರಕಾರವನ್ನು ಬೀಳಿಸಲು ಪ್ರಯತ್ನಿಸಿದ್ದಾರೆ"ಎಂದು ಭಾರದ್ವಾಜ್ ಹೇಳಿದ್ದಾರೆ







