ಉಡುಪಿ ನಗರದಲ್ಲಿ ಸಾವರ್ಕರ್ ಪ್ರತಿಮೆ ಸ್ಥಾಪಿಸುವುದು ಸಮಂಜಸವಲ್ಲ: ಶಾಸಕ ರಘುಪತಿ ಭಟ್
ʼಸಾವರ್ಕರ್ ಸರ್ಕಲ್ ನಿರ್ಮಿಸಲು ನಗರಸಭೆಗೆ ಪತ್ರʼ

ಉಡುಪಿ, ಆ.23: ಉಡುಪಿ ನಗರದಲ್ಲಿ ಸಾವರ್ಕರ್ ಪ್ರತಿಮೆ ಮಾಡುವುದು ಅಷ್ಟೊಂದು ಸಮಂಜಸವಲ್ಲ. ಮುಂದಿನ ದಿನಗಳಲ್ಲಿ ಸಾವರ್ಕರ್ ಪ್ರತಿಮೆಗೆ ಅವಮಾನವಾದರೆ ಕಷ್ಟಲಾಗುತ್ತದೆ. ಪುತ್ಥಳಿ ಬದಲಿಗೆ ಸಾವರ್ಕರ್ ಸರ್ಕಲ್ ನಿರ್ಮಿಸಲು ನಗರಸಭೆಗೆ ಪತ್ರ ಬರೆದಿದ್ದೇನೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನನಿಬಿಡ ಪ್ರದೇಶವಾದ ಹಳೆ ತಾಲೂಕು ಆಫೀಸ್ ಬಳಿಯ ಸರ್ಕಲ್‌ಗೆ ಸಾವರ್ಕರ್ ಹೆಸರು ಇಡುವಂತೆ ನಗರ ಸಭೆಯ ಅಧಿವೇಶನದಲ್ಲಿ ಠರಾವು ಇಡುತ್ತೇನೆ. ಈ ಬಗ್ಗೆ ಈಗಾಗಲೇ ನಗರಸಭೆಗೆ ಪತ್ರ ಬರೆದಿದ್ದೇನೆ. ಮೂರ್ತಿ ನಿರ್ಮಿಸುವ ಬಗ್ಗೆ ಚರ್ಚೆ ಮಾಡಬೇಕು. ಖಂಡಿತವಾಗಿ ಉಡುಪಿಯಲ್ಲಿ ವೀರ ಸಾವರ್ಕರ್ ಸರ್ಕಲ್ ನಿರ್ಮಾಣವಾಗುತ್ತದೆ. ವೀರ ಸಾವರ್ಕರ್ ಜೊತೆಗೆ ಅಂಬೇಡ್ಕರ್ ಸರ್ಕಲ್ ಕೂಡ ಮಾಡುತ್ತೇವೆ ಎಂದರು.
ಹಿಜಾಬ್ ಗದ್ದಲದಿಂದ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣ ವಂಚನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕರು, ಹಿಜಾಬ್ ಹೋರಾಟವನ್ನು ಪ್ರಾರಂಭ ಮಾಡಿರುವುದು ಸಿಎಫ್‌ಐಯೇ ಹೊರತು ನಾವಲ್ಲ. ನಮ್ಮ ಕಾಲೇಜಿನಲ್ಲಿ ಹಿಂದಿನಿಂದಲೂ ಯೂನಿಫಾರ್ಮ್ ಕೋಡ್ ಪಾಲನೆ ಆಗುತ್ತಿತ್ತು. ಕಳೆದ 20 ವರ್ಷ ದಿಂದ ಯೂನಿಫಾರ್ಮ್ ಕೋಡ್ ಇದ್ದ ಬಗ್ಗೆ ದಾಖಲೆ ಕೋರ್ಟಿಗೆ ಸಲ್ಲಿಸಿದ್ದೇವು. ಅದೇ ಕಾರಣಕ್ಕೆ ನಮಗೆ ಹೈಕೋರ್ಟಿನಲ್ಲಿ ಜಯ ಸಿಕ್ಕಿದೆ ಎಂದು ಹೇಳಿದರು.





