ಸ್ವದೇಶಕ್ಕೆ ವಾಪಸ್ ಕಳುಹಿಸಿದ ಕ್ರಮವನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋದ ಇಂಗ್ಲೆಂಡ್‍ನ ಖ್ಯಾತ ಮಾನವಶಾಸ್ತ್ರಜ್ಞ
"ವಿಮಾನ ನಿಲ್ದಾಣದಲ್ಲಿ ಭಾರತದ ಪ್ರಾಧಿಕಾರಗಳು ತನ್ನನ್ನು ಕ್ರಿಮಿನಲ್‍ನಂತೆ ನಡೆಸಿಕೊಂಡಿವೆ"

ಹೊಸದಿಲ್ಲಿ: ಮಾರ್ಚ್ ತಿಂಗಳಿನಲ್ಲಿ ತಮ್ಮನ್ನು ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಪಸ್ ಕಳುಹಿಸಿದ ಕ್ರಮವನ್ನು ಪ್ರಶ್ನಿಸಿ ಇಂಗ್ಲೆಂಡ್ ಮೂಲದ ಖ್ಯಾತ ಮಾನವಶಾಸ್ತ್ರಜ್ಞ(Anthropologist) ಫಿಲಿಪ್ಪೊ ಒಸೆಲ್ಲಾ(Filippo Osella) ಅವರು ದಿಲ್ಲಿ ಹೈಕೋರ್ಟಿನ ಕದ ತಟ್ಟಿದ್ದಾರೆ. ಭಾರತದ ಪ್ರಾಧಿಕಾರಗಳು ತನ್ನನ್ನು ಕುಖ್ಯಾತ ಕ್ರಿಮಿನಲ್‍ನಂತೆ ನಡೆಸಿಕೊಂಡಿವೆ ಎಂದೂ ಅವರು ತಮ್ಮ ಅರ್ಜಿಯಲ್ಲಿ ದೂರಿದ್ದಾರೆ.
ಕೇರಳದ ಕರಾವಳಿ ಸಮುದಾಯಗಳ ಜೀವನ ಮತ್ತು ಜೀವನೋಪಾಯ ಕುರಿತ ಸಂಶೋಧನಾ ಸಮ್ಮೇಳನವೊಂದರಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಲು ಒಸೆಲ್ಲಾ ಅವರು ಮಾರ್ಚ್ 24 ರಂದು ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು.
ಆದರೆ ತಮ್ಮನ್ನು ಅಲ್ಲಿಂದ ವಾಪಸ್ ಕಳುಹಿಸಿದ ಕ್ರಮ ಅಸಂವಿಧಾನಿಕವಾಗಿದೆ ಹಾಗೂ ಇಲ್ಲಿಯ ತನಕ ತಮಗೆ ಭಾರತ ಪ್ರವೇಶಕ್ಕೆ ಏಕೆ ನಿರಾಕರಿಸಲಾಗಿದೆ ಎಂಬ ವಿವರಣೆಯನ್ನು ಒದಗಿಸಲಾಗಿಲ್ಲ ಎಂದು ಅವರು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.
ಒಸೆಲ್ಲಾ ಅವರು ಆಗಮಿಸಿದ್ದ ವಿಮಾನದಲ್ಲೇ ಅವರನ್ನು ಅಂದು ವಾಪಸ್ ಕಳುಹಿಸಲಾಗಿತ್ತು.
ಇದನ್ನೂ ಓದಿ: ACB ರದ್ದು ಪ್ರಶ್ನಿಸಿ ಸುಪ್ರೀಂನಲ್ಲಿ ಮೇಲ್ಮನವಿ
ಅವರ ಲಗೇಜಿನಲ್ಲಿದ್ದ ಅವರ ರಕ್ತದೊತ್ತಡ ನಿಯಂತ್ರಣ ಔಷಧಿಗಳನ್ನೂ ಪಡೆಯಲು ನಿರಾಕರಿಸಲಾಗಿತ್ತೆಂದು ಆರೋಪಿಸಲಾಗಿದೆ.
ಇಂಗ್ಲೆಂಡ್‍ನ ಯುನಿವರ್ಸಿಟಿ ಆಫ್ ಸಸೆಕ್ಸ್ ಇಲ್ಲಿನ ಮಾನವಶಾಸ್ತ್ರ ಮತ್ತು ದಕ್ಷಿಣ ಏಷ್ಯಾ ಅಧ್ಯಯನಗಳ ವಿಭಾಗದ ಪ್ರೊಫೆಸರ್ ಆಗಿರುವ ಒಸೆಲ್ಲಾ ಅವರ ಅರ್ಜಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಗೃಹ ಸಚಿವಾಲಯ, ಬ್ಯುರೋ ಆಫ್ ಇಮ್ಮಿಗ್ರೇಶನ್ ಮತ್ತು ತಿರುವನಂತಪುರಂನ ಫಾರಿನ್ ರೀಜನಲ್ ರಿಜಿಸ್ಟ್ರೇಶನ್ ಆಫೀಸರ್ ಅವರನ್ನು ಪ್ರತಿವಾದಿಯನ್ನಾಗಿಸಲಾಗಿದೆ.
ಸೋಮವಾರ ಈ ಪ್ರಕರಣ ವಿಚಾರಣೆಗೆ ಬಂದಾಗ ಜಸ್ಟಿಸ್ ಯಶವಂತ್ ವರ್ಮ ಅವರು ಕೇಂದ್ರ ಸರಕಾರದ ನಿಲುವನ್ನು ಕೇಳಿದರು. ಮುಂದಿನ ವಿಚಾರಣೆ ಅಕ್ಟೋಬರ್ 12ರಂದು ನಡೆಯಲಿದೆ.







