ಸಿದ್ದರಾಮಯ್ಯರ ಕಾರಿನ ಮೇಲೆ ಮೊಟ್ಟೆ ಎಸೆದವರು ರಣಹೇಡಿಗಳು: ಡಾ.ಪುಷ್ಪಾ ಅಮರ್‌ನಾಥ್

ಮೈಸೂರು: ಕೊಡಗಿನಲ್ಲಿ ಉಂಟಾದ ಪ್ರವಾಹ ವೀಕ್ಷಣೆಗೆ ತರಳಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದವರು ರಣಹೇಡಿಗಳು ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಪುಷ್ಪಾ ಅಮರ್ ನಾಥ್ ಬಿಜೆಪಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊಡಗಿನವರು ವೀರರು, ಅಲ್ಲಿನ ಜನ ಬಹಳ ಒಳ್ಳೆಯವರು ಆದರೆ ಸಿದ್ದರಾಮಯ್ಯ ಅವರ 75 ನೇ ವರ್ಷದ ಅಮೃತ ಮಹೋತ್ಸವವನ್ನು ಸಹಿಸಿಕೊಳ್ಳಲಾಗದೆ ಅವರ ವರ್ಚಸ್ಸನ್ನು ಕುಗ್ಗಿಸಬೇಕು ಎಂದು ಬಿಜೆಪಿಯ ರಣಹೇಡಿಗಳು ಮೊಟ್ಟೆ ಎಸೆದಿದ್ದಾರೆ. ಇಂದು ಮೈಸೂರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಿದ್ದಾರೆ. ಅವರಿಗೂ ನಾವು ಮೊಟ್ಟೆ ಎಸೆದು ಕಪ್ಪು ಬಾವುಟ ತೋರಿಸಬಹುದಿತ್ತು, ಆದರೆ ಅದು ಕಾಂಗ್ರೆಸ್ ಸಂಸ್ಕೃತಿಯಲ್ಲ, ಅದು ಬಿಜೆಪಿ ಸಂಸ್ಕೃತಿ ಎಂದು ಹರಿಹಾಯ್ದರು.
ರಾಜ್ಯ ಸರ್ಕಾರ ಉತ್ತಮ ಆಡಳಿತ ನೀಡಯವಲ್ಲಿ ವಿಫಲವಾಗಿದೆ. ಧರ್ಮ ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡಿ ಕೋಮು ಗಲಭೆ ಸೃಷ್ಟಿಸುತ್ತಿದೆ. ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಜನ ಕಾಯುತ್ತಿದ್ದಾರೆ. ಅದಕ್ಕಾಗಿ ಬಿಜೆಪಿಯವರು ಅನಗತ್ಯ ಗೊಂದಲಗಳನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ನಡೆಯುತ್ತಿರುವುದು ಅಭಿವೃದ್ಧಿಯ ಸರ್ಕಾರವಲ್ಲ, ಇದು ಕಮಿಷನ್ ಸರ್ಕಾರ, ಹಾಗಾಗಿ ಇವರ ದೌರ್ಬಲ್ಯಗಳನ್ನು ಮರೆಮಾಚಲು ಬಿಜೆಪಿ ಕ್ಷುಲ್ಲಕ ವಿಚಾರಗಳನ್ನು ಮುಂದೆ ತರುತ್ತಿದೆ. ಬಿಜೆಪಿ ನಾಯಕರ ಎಷ್ಟು ಮಕ್ಕಳನ್ನು ಇವರು ಬೀದಿಗೆ ಬಿಟ್ಟಿದ್ದಾರೆ. ಬರೀ ಬಡವರು ಹಿಂದುಳಿದ ವರ್ಗಗಳ ಮಕ್ಕಳನ್ನು ಬಳಸಿಕೊಂಡು ಸಂಘರ್ಷ ಉಂಟು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಪುಷ್ಪಾ ಜಗನ್ನಾಥ್, ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಪುಷ್ಪವಲ್ಲಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.







