ಪ್ರವಾದಿ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ ತೆಲಂಗಾಣ ಶಾಸಕನನ್ನು ವಜಾಗೊಳಿಸಿದ ಬಿಜೆಪಿ

ಶಾಸಕ ಟಿ. ರಾಜಾ ಸಿಂಗ್
ಹೊಸದಿಲ್ಲಿ: ಪ್ರವಾದಿ ಮುಹಮ್ಮದ್ ಅವರ ಕುರಿತಂತೆ ನಿಂದನಾತ್ಮಕ ಹೇಳಿಕೆ ನೀಡಿದ ತೆಲಂಗಾಣದ ಬಿಜೆಪಿ(BJP) ಶಾಸಕ ಟಿ. ರಾಜಾ ಸಿಂಗ್(T Raja Singh) ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ. ಶಾಸಕನಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದ್ದು 10 ದಿನಗಳೊಳಗೆ ವಿವರಣೆ ನೀಡುವಂತೆಯೂ ಸೂಚಿಸಲಾಗಿದೆ. ಶಾಸಕನನ್ನು ಅದಾಗಲೇ ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.
"ಪಕ್ಷದ ನಿಲುವಿಗೆ ವಿರುದ್ಧವಾಗಿ ನೀವು ವಿವಿಧ ವಿಚಾರಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದೀರಿ, ಇದು ಬಿಜೆಪಿಯ ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ ಮುಂದಿನ ವಿಚಾರಣೆ ತನಕ ನಿಮ್ಮನ್ನು ಪಕ್ಷದಿಂದ ವಜಾಗೊಳಿಸಲಾಗಿದೆ, ನೋಟಿಸಿಗೆ ಉತ್ತರವನ್ನು 10 ದಿನಗಳೊಳಗಾಗಿ ಸೆಪ್ಟೆಂಬರ್ 2ರೊಳಗೆ ನೀಡಬೇಕು'' ಎಂದು ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಪ್ರವಾದಿಯ ವಿರುದ್ಧ ನಿಂದನಾತ್ಮಕ ಮಾತುಗಳನ್ನಾಡುವ ವೀಡಿಯೋವನ್ನು ಸಿಂಗ್ ಸೋಮವಾರ ರಾತ್ರಿ ಬಿಡುಗಡೆಗೊಳಿಸಿದ ನಂತರ ಎದ್ದ ವಿವಾದದ ಬೆನ್ನಲ್ಲೇ ಪೊಲೀಸರು ಇಂದು ಅವರನ್ನು ಬಂಧಿಸಿ ಅವರ ವಿರುದ್ಧ ಐಪಿಸಿ ಸೆಕ್ಷನ್ 153ಎ, 295, 505 ಅನ್ವಯ ಪ್ರಕರಣ ದಾಖಲಿಸಿದ್ದಾರೆ.





