ಯಾವುದೇ ದೇವರು ಬ್ರಾಹ್ಮಣರಲ್ಲ: ಜೆಎನ್ಯು ಉಪಕುಲಪತಿ

ಜೆಎನ್ಯು ಉಪಕುಲಪತಿ ಶಾಂತಿಶ್ರೀ ಧುಲಿಪುಡಿ ಪಂಡಿತ್ ( Twitter)
ಹೊಸದಿಲ್ಲಿ: ಮಾನವಶಾಸ್ತ್ರೀಯವಾಗಿ ಹೇಳುವುದಾದರೆ ದೇವರುಗಳು ಮೇಲ್ಜಾತಿಗೆ ಸೇರಿದವರಲ್ಲ ಹಾಗೂ ಶಿವ ಕೂಡ ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದವರಾಗಿರಬಹುದು ಎಂದು ಜೆಎನ್ಯು ಉಪಕುಲಪತಿ(JNU Vice-Chancellor ) ಶಾಂತಿಶ್ರೀ ಧುಲಿಪುಡಿ ಪಂಡಿತ್(Santishree Dhulipudi Pandit) ಅವರು ಹೇಳಿದ್ದಾರೆ.
ಡಾ. ಬಿ. ಆರ್. ಅಂಬೇಡ್ಕರ್ ಭಾಷಣ ಮಾಲಿಕೆ ಭಾಗವಾಗಿ "ಲಿಂಗ ಸಮಾನತೆ ಕುರಿತು ಡಾ ಬಿ ಆರ್ ಅಂಬೇಡ್ಕರ್ ಅವರ ಚಿಂತನೆಗಳು: ಸಮಾನ ನಾಗರಿಕ ಸಂಹಿತೆಯ ವಿಮರ್ಶೆ'' ಎಂಬ ವಿಚಾರವಾಗಿ ಅವರು ಭಾಷಣ ಮಾಡುವ ವೇಳೆ ಮೇಲಿನಂತೆ ಹೇಳಿದ್ದಾರೆ.
ಇತ್ತೀಚೆಗೆ ದಲಿತ ಬಾಲಕನೊಬ್ಬನ ಮೇಲೆ ನಡೆದ ದೌರ್ಜನ್ಯದ ಕುರಿತು ಉಲ್ಲೇಖಿಸಿ ಮಾತನಾಡಿದ ಅವರು "ಯಾವುದೇ ದೇವರು ಮೇಲ್ಜಾತಿಗೆ ಸೇರಿದವರಲ್ಲ. ಮಾನವಶಾಸ್ತ್ರೀಯವಾಗಿ ದೇವರುಗಳ ಮೂಲದ ಬಗ್ಗೆ ನಿಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿರಬೇಕು. ಯಾವುದೇ ದೇವರು ಬ್ರಾಹ್ಮಣರಲ್ಲ(brahmin), ದೇವರ ಅತ್ಯಂತ ಉನ್ನತ ಜಾತಿಯೆಂದರೆ ಕ್ಷತ್ರಿಯ. ಶಿವ ದೇವರು ಕುತ್ತಿಗೆಯಲ್ಲಿ ಹಾವನ್ನಿರಿಸಿಕೊಂಡು, ಅಲ್ಪ ಬಟ್ಟೆ ಧರಿಸಿ ಸ್ಮಶಾನದಲ್ಲಿ ಕುಳಿತುಕೊಳ್ಳುವುದರಿಂದ ಅವರು ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿರಬೇಕು, ಏಕೆಂದರೆ ಯಾವುದೇ ಬ್ರಾಹ್ಮಣನಿಗೆ ಸ್ಮಶಾನದಲ್ಲಿ ಕುಳಿತುಕೊಳ್ಳುವುದು ಸಾಧ್ಯ ಎಂದು ನನಗನಿಸುತ್ತಿಲ್ಲ,'' ಎಂದು ಅವರು ಹೇಳಿದರು.
"ದೇವರುಗಳಾದ ಲಕ್ಷ್ಮಿ, ಶಕ್ತಿ ಅಥವಾ ಜಗನ್ನಾಥ ಕೂಡ ಮೇಲ್ಜಾತಿಯಿಂದ ಬರುವುದಿಲ್ಲ, ಜಗನ್ನಾಥನ ಮೂಲವೂ ಆದಿವಾಸಿ,'' ಹೀಗಿರುವಾಗ ಅಮಾನವೀಯ ಜಾತಿ ತಾರತಮ್ಯವೇಕೆ? ಅಂಬೇಡ್ಕರ್ ಅವರಷ್ಟು ಮಹಾನ್ ಚಿಂತಕರು ಆಧುನಿಕ ಭಾರತದಲ್ಲಿ ಬೇರೊಬ್ಬರಿಲ್ಲ. ಹಿಂದು ಎಂಬುದು ಒಂದು ಧರ್ಮವಲ್ಲ ಅದು ಜೀವನ ವಿಧಾನ, ಹೀಗಿರುವಾಗ ಟೀಕೆಯ ಬಗ್ಗೆ ಭಯವೇಕೆ?'' ಎಂದು ಅವರು ಪ್ರಶ್ನಿಸಿದರು.
"ಮಹಿಳೆಯರಿಗೆ ಮನುಸ್ಮೃತಿಯಲ್ಲಿ ಶೂದ್ರರ ಸ್ಥಾನಮಾನ ನೀಡಿರುವುದು ಅದನ್ನು ಬಹಳಷ್ಟು ಪುರೋಗಾಮಿಯಾಗಿಸುತ್ತದೆ,'' ಎಂದು ಅವರು ಹೇಳಿದರು.
"ಮನುಸ್ಮೃತಿ ಪ್ರಕಾರ ಎಲ್ಲಾ ಮಹಿಳೆಯರು ಶೂದ್ರರು ಎಂದು ನಾನು ಎಲ್ಲಾ ಮಹಿಳೆಯರಿಗೆ ಹೇಳಬಯಸುತ್ತೇನೆ. ಈ ಮೂಲಕ ಯಾವುದೇ ಮಹಿಳೆ ತಾನೊಬ್ಬ ಬ್ರಾಹ್ಮಣಳು ಆಥವಾ ಇನ್ಯಾವುದೋ ಎಂದು ಹೇಳಲು ಸಾಧ್ಯವಿಲ್ಲ ಹಾಗೂ ಮಹಿಳೆಯ ಮದುವೆಯ ನಂತರವಷ್ಟೇ ಆಕೆಗೆ ಗಂಡನ ಅಥವಾ ಆಕೆಯ ತಂದೆಯ ಜಾತಿ ದೊರೆಯುತ್ತದೆ, ಇದು ಭಾರೀ ಪುರೋಗಾಮಿ,'' ಎಂದು ಅವರು ಹೇಳಿದರು.
ಇದನ್ನೂ ಓದಿ: ಪ್ರವಾದಿ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ ತೆಲಂಗಾಣ ಶಾಸಕನನ್ನು ವಜಾಗೊಳಿಸಿದ ಬಿಜೆಪಿ







