ಮಾಂಸಾಹಾರ ತಿಂದು ದೇವಾಲಯ ಪ್ರವೇಶ ವಿವಾದ; ಸಿದ್ದರಾಮಯ್ಯರಿಂದ ಸಾವರ್ಕರ್ ಕುರಿತ ವಿವಾದ ಮರೆಮಾಚುವ ಯತ್ನ: ನಳಿನ್ ಕುಮಾರ್

ಸಂಸದ ನಳಿನ್ ಕುಮಾರ್ ಕಟೀಲ್
ಮಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಕುರಿತ ಹೇಳಿಕೆಯ ವಿವಾದವನ್ನು ಮರೆಮಾಚಲು ಈಗ ಮಾಂಸ ಸೇವಿಸಿ ದೇವಸ್ಥಾನ ಭೇಟಿ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ, ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ.
ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಸಮಾಜವಾದಿ ಚಿಂತನೆಯ, ನಾಸ್ತಿಕವಾದಿ ಕಾಂಗ್ರೆಸ್ಸಿಗ ಸಿದ್ದರಾಮಯ್ಯನವರು. ಅವರು ದೇವರು, ದಿಂಡರನ್ನು ನಂಬದೆ ಇರುವ ವ್ಯಕ್ತಿ ಸಾವರ್ಕರ್ ಅವರ ಹೋರಾಟ ಮತ್ತು ರಾಷ್ಟ್ರಾಭಿಮಾನವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯರು ದೇವರನ್ನೂ ನಂಬುವುದಿಲ್ಲ, ರಾಷ್ಟ್ರವನ್ನೂ ನಂಬುವುದಿಲ್ಲ. ಅಂತಹ ವ್ಯಕ್ತಿಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ನಳಿನ್ ಕುಮಾರ್ ಪ್ರತಿಕ್ರಿಯಿಸಿದರು.
ಮಾಂಸ ತಿಂದು ದೇವಸ್ಥಾನಕ್ಕೆ ತೆರಳುವ ವಿಚಾರದಲ್ಲಿ ಸಿದ್ದರಾಮಯ್ಯ ಅವರದೇ ಚಿಂತನೆಯನ್ನು ಹರಿಯಬಿಟ್ಟಿದ್ದಾರೆ. ಮಾಂಸ ತಿಂದು ದೇವಸ್ಥಾನಕ್ಕೆ ಹೋಗಬಾರದು ಎಂದು ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ, ಇದು ಅವರ ಭಾವನೆ, ನಂಬಿಕೆಗೆ ಬಿಟ್ಟ ವಿಚಾರ. ಸಾವರ್ಕರ್ ಬಗೆಗಿನ ಹೇಳಿಕೆ ವಿವಾದಕ್ಕೆ ತಿರುಗಿದ್ದನ್ನು ಮರೆಮಾಚಲು ಮಾಂಸ ಸೇವಿಸಿ ದೇವಸ್ಥಾನ ಭೇಟಿ ವಿಚಾರವನ್ನು ಮಾತನಾಡುತ್ತಿದ್ದಾರೆ. ಅಧಿಕಾರ ಇಲ್ಲದೆ ವಿಲವಿಲ ಒದ್ದಾಡುತ್ತಿರುವ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಎದುರು ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ದಿನಕ್ಕೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ನಳಿನ್ ಆರೋಪಿಸಿದರು.
ಸಾವರ್ಕರ್ ಎರಡೆರಡು ಬಾರಿ ಅಂಡಮಾನ್ ಜೈಲಿನಲ್ಲಿ ಕರಿನೀರಿನ ಶಿಕ್ಷೆಗೆ ಒಳಗಾಗಿದ್ದಾರೆ. ಕಾಂಗ್ರೆಸ್ನಲ್ಲಿ ಯಾವ ನಾಯಕನಿಗೆ ಇಂತಹ ಶಿಕ್ಷೆ ಆಗಿದೆ? ಯಾವ ಕಾಂಗ್ರೆಸಿಗರೆಲ್ಲ ಅಂಡಮಾನ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದಾರೆ? ಪ್ರಧಾನಿಯಾಗಿದ್ದಾಗ ಇಂದಿರಾಗಾಂಧಿ ಅವರು ಯಾಕಾಗಿ ಸಾವರ್ಕರ್ರ ಅಂಚೆ ಚೀಟಿ ಬಿಡುಗಡೆ ಮಾಡಿದ್ದಾರೆ? ಹಾಗಾದರೆ ಸಾವರ್ಕರ್ರ ಹೋರಾಟವನ್ನು ಯಾಕೆ ಇಂದಿರಾಗಾಂಧಿ ಹೊಗಳಿದ್ದಾರೆ? ಈ ಎಲ್ಲ ವಿಚಾರ ಸಿದ್ದುಗೆ ತಿಳಿದಿಲ್ಲವೇ ಎಂದು ನಳಿನ್ ಕುಮಾರ್ ಪ್ರಶ್ನಿಸಿದರು.
ಸಾವರ್ಕರ್ರ ಹೋರಾಟ ಹಾಗೂ ರಾಷ್ಟ್ರಾಭಿಮಾನವನ್ನು ಪ್ರಶ್ನಿಸುವ ಭಂಡ ನಾಯಕ ಸಿದ್ದರಾಮಯ್ಯ ಆಗಿದ್ದಾರೆ. ಈಗಲಾದರೂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ನವರು ಸಾವರ್ಕರ್ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಕಾಂಗ್ರೆಸ್ನಲ್ಲಿ ನಾಯಕತ್ವಕ್ಕಾಗಿ ಕಚ್ಚಾಟ ಜಾಸ್ತಿಯಾಗುತ್ತಿದೆ. ನಾನಾ ರೀತಿಯ ಹೇಳಿಕೆ ನೀಡುವ ಮೂಲಕ ಸಿದ್ದರಾಮಯ್ಯ ತನ್ನ ಮಾನಸಿಕತೆ ತೋರಿಸಿಕೊಳ್ಳುತ್ತಿದ್ದಾರೆ. ಡಿಕೆಶಿ, ಖರ್ಗೆಯವರನ್ನು ಮೀರಿಸಿ ನಾನಿದ್ದೇನೆ ಎಂದು ತೋರಿಸಿಕೊಳ್ಳಲು ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.







