ಆ.25ರಿಂದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಗ್ರ್ಯಾಂಡ್ ಫಿನಾಲೆ

ಮಂಗಳೂರು: ಕೇಂದ್ರ ಶಿಕ್ಷಣ ಸಚಿವಾಲಯದ ಆವಿಷ್ಕಾರ ಕೋಶ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಹೊಸದಿಲ್ಲಿ ವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಭಾಗವಾಗಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (ಎಸ್‌ಐಎಚ್)ನ 2022ರ ಗ್ರ್ಯಾಂಡ್ ಫಿನಾಲೆ ದೇಶದ 75 ಕಾಲೇಜುಗಳಲ್ಲಿ ನಡೆಯಲಿದೆ.
ಆ.25 ಮತ್ತು 26ರಂದು ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗ್ರ್ಯಾಂಡ್ ಫಿನಾಲೆ ಆಯೋಜನೆಗೊಂಡಿದೆ ಎಂದು ಸಹ್ಯಾದ್ರಿ ಕಾಲೇಜಿನ ಸಂಶೋಧನಾ ನಿರ್ದೇಶಕ ಡಾ. ಎಸ್. ಮಂಜಪ್ಪ ತಿಳಿಸಿದರು.
ಕೃಷಿ, ಆಹಾರ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಪಟ್ಟಿ ಮಾಡಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವಿಷಯದಲ್ಲಿ ಈ ಸ್ಪರ್ಧೆ ನಡೆಯಲಿದೆ.
ವಿದ್ಯಾರ್ಥಿಗಳಿಗೆ ಪರಿಹಾರ ಕಂಡುಕೊಳ್ಳಲು 36 ಗಂಟೆ ಕಾಲಾವಕಾಶ ಇರುತ್ತದೆ. ಮೊದಲ ಬಹುಮಾನವಾಗಿ 1 ಲಕ್ಷ ರೂ., ಎರಡನೇ ಬಹುಮಾನ 75 ಸಾವಿರ ರೂ., ಮೂರನೇ ಬಹುಮಾನ 50 ಸಾವಿರ ರೂ. ಇರುತ್ತದೆ. ದೇಶದ ವಿವಿಧ ಕಾಲೇಜುಗಳಿಂದ ಸುಮಾರು 200 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ಆಯೋಜಿಸಲು ದೇಶದ 75 ಕಾಲೇಜುಗಳು ಆಯ್ಕೆಯಾಗಿವೆ. ಈ ಪೈಕಿ ರಾಜ್ಯದ ಒಟ್ಟು 8 ಕಾಲೇಜುಗಳು ಇವೆ. ಇದರಲ್ಲಿ ಸಹ್ಯಾದ್ರಿ ಕಾಲೇಜು ಕೂಡ ಒಂದಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಆ.25ರಂದು ಬೆಳಗ್ಗೆ 9 ಗಂಟೆಗೆ ವರ್ಚುವಲ್ ಆಗಿ ಏಕಕಾಲಕ್ಕೆ ಉದ್ಘಾಟನೆಗೊಳ್ಳಲಿದೆ. ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ನಲ್ಲಿ ಭಾಗವಹಿಸುವವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆ.25ರಂದು ಆನ್‌ಲೈನ್ ಮುಖೇನ ಸಂವಾದ ನಡೆಸುವ ಸಾಧ್ಯತೆ ಇದೆ. ವಿಭಾಗ ಮಟ್ಟದಲ್ಲಿ ಬೆಳಗ್ಗೆ ೮ ಗಂಟೆಯಿಂದ ೮.೪೫ರೊಳಗೆ ಉದ್ಘಾಟನೆ ನಡೆಯಲಿದೆ. ಸಹ್ಯಾದ್ರಿ ಕಾಲೇಜಿನಲ್ಲಿ ಕಾಲೇಜಿನ ಅಧ್ಯಕ್ಷ ಮಂಜುನಾಥ ಭಂಡಾರಿ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಕಾಲೇಜು ಪ್ರಾಂಶುಪಾಲ ಡಾ. ರಾಜೇಶ್ ಎಸ್., ಡೀನ್ ರಮೇಶ್ ಕೆ.ಜಿ., ಶೈಕ್ಷಣಿಕ ಆಡಳಿತ ಅಧಿಕಾರಿ ಶ್ರೀಲತಾ ಯು.ಎ., ಕಾರ್ಯಕ್ರಮ ಸಂಯೋಜಿಕಿ ಡಾ. ಪ್ರಿಯಾ ಆರ್. ಕಾಮತ್ ಉಪಸ್ಥಿತರಿದ್ದರು.