ಇನ್ನೂ ರಾಜೀನಾಮೆ ಸ್ವೀಕಾರ ಮಾಡಿಲ್ಲ, ನನ್ನನ್ನು ಸಿಲುಕಿಸುವ ಸಂಚು ಇರಬಹುದು: ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್

ಬಾಗಲಕೋಟೆ, ಆ. 23: 'ಒಂದು ವರ್ಷವಾದರೂ ನನ್ನ ರಾಜೀನಾಮೆ ಅಂಗೀಕಾರ ಮಾಡಿಲ್ಲ. ಹೀಗಾಗಿ, ನನ್ನನ್ನು ಸಿಲುಕಿಸುವ ಸಂಚು ಇರಬಹುದು' ಎಂದು ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ (Bhaskar Rao) ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಿಜೆಪಿ ಸೇರಿದರೆ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದರು. ಹೀಗಾಗಿ, ಇನ್ನೂ ರಾಜೀನಾಮೆ ಸ್ವೀಕಾರ ಮಾಡಿಲ್ಲ. ಅಲ್ಲದೆ, ನನ್ನನ್ನು ಯಾವುದರಲ್ಲಾದರೂ ಸಿಕ್ಕಿಸಬಹುದು' ಎಂದು ಅವರು ತಿಳಿಸಿದರು.
ನಾನು ಪೊಲೀಸ್ ಅಧಿಕಾರಿ ಸ್ಥಾನಕ್ಕೆ ಕಳೆದ ವರ್ಷ ಸೆಪ್ಟಂಬರ್ 16ರಂದು ರಾಜೀನಾಮೆ ಕೊಟ್ಟಿದ್ದೇನೆ. ಆಲ್ ಇಂಡಿಯಾ ಸರ್ವಿಸಸ್ ಪ್ರಕಾರ ನನ್ನ ಪಿಂಚಣಿ ಮಾಡಿಕೊಡಿ ಎಂದು ಮುಖ್ಯಮಂತ್ರಿಗಳಿಗೆ ಮೌಖಿಕವಾಗಿ 15 ಬಾರಿ ಹಾಗೂ ನಾಲ್ಕು ಬಾರಿ ಪತ್ರ ಬರೆದುಕೊಟ್ಟಿದ್ದೇನೆ. ಆದರೂ ಈವರೆಗೂ ನನ್ನ ರಾಜೀನಾಮೆ ಅಂಗೀಕರಿಸಿಲ್ಲ ಎಂದರು.
ಕಾಂಗ್ರೆಸ್ ಪಕ್ಷದವರು 70 ವರ್ಷದಲ್ಲಿ ದೇಶವನ್ನು ಲೂಠಿ ಮಾಡಿ ಹಾಳು ಮಾಡಿದ್ದನ್ನು, ಇವರು (ಬಿಜೆಪಿ) 7 ವರ್ಷದಲ್ಲಿ ಮಾಡಿದ್ದಾರೆ. ಅಲ್ಲದೆ, ಭಯದ ವಾತಾವರಣವನ್ನೂ ಉಂಟು ಮಾಡಿದ್ದಾರೆ ಎಂದು ಟೀಕಿಸಿದ ಅವರು, ನನ್ನ ಬಳಿಯೂ ಸರಕಾರದ ಒಳಗಿನ ಅನೇಕ ಮಾಹಿತಿಗಳಿವೆ. ಸಮಯ, ಸಂದರ್ಭ ಬಂದಾಗ ಬಹಿರಂಗ ಪಡಿಸುವ ಬಗ್ಗೆ ನೋಡೋಣ ಎಂದರು.
ಇದನ್ನೂ ಓದಿ: ಪುಂಡಾಟಿಕೆ ಮಾಡಿಕೊಂಡು ತಿರುಗುತ್ತಿರುವ ಪ್ರತಾಪ ಸಿಂಹ: ಎಚ್.ಸಿ.ಮಹದೇವಪ್ಪ ಕಿಡಿ







