ಟಿಪ್ಪು ಸುಲ್ತಾನ್ ವಿರುದ್ಧ ಸಿ.ಟಿ.ರವಿ ಹೇಳಿಕೆಗೆ ಖಂಡನೆ: ಮುಸ್ಲಿಂ ಲೀಗ್

ಮಂಗಳೂರು: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ‘ಟಿಪ್ಪು ಸುಲ್ತಾನ್ ಹೆಸರು ಕೇಳಿದರೆ ಹಿಂದೂಗಳ ರಕ್ತ ಬಿಸಿಯಾಗುತ್ತದೆ’ ಎಂದು ನೀಡಿರುವ ಹೇಳಿಕೆಯನ್ನು ಮುಸ್ಲಿಂ ಲೀಗ್ ಖಂಡಿಸಿದೆ.
ಟಿಪ್ಪು ಸುಲ್ತಾನ್ ದೇಶಪ್ರೇಮಿ, ಬ್ರಿಟೀಷರನ್ನು ಭಾರತದಿಂದ ಹೊಡೆದೋಡಿಸಲು ಹೋರಾಡಿದ ವೀರ. ಸುಲ್ತಾನರ ಸಾಹಸ ಮೆಚ್ಚಿ ವಿರೋಧಿಗಳೇ ಮೈಸೂರಿನ ಹುಲಿ ಎಂದು ಬಿರುದನ್ನು ನೀಡಿದ್ದರು. ಅಂತಹ ವ್ಯಕ್ತಿಯ ಬಗ್ಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಜಿಲ್ಲಾ ಮುಸ್ಲಿಂ ಲೀಗ್‌ನ ಕಾರ್ಯದರ್ಶಿ ಮುಹಮ್ಮದ್ ಇಸ್ಮಾಯಿಲ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅನ್ಯ ರಾಜ್ಯದವರು ಶೃಂಗೇರಿ ಮಠದ ಮೇಲೆ ದಾಳಿಗೆ ಬಂದಾಗ ಸುಲ್ತಾನರು ಆ ದೇವಸ್ಥಾನವನ್ನು ರಕ್ಷಿಸಿದ್ದರು. ಕೊಲ್ಲೂರು ಮೂಕಾಂಬಿಕಾ ದೇವಾಲಯ ಸಹಿತ ಅನೇಕ ದೇವಾಲಯಗಳಲ್ಲಿ ಸುಲ್ತಾನರ ಅಪಾರ ಕೊಡುಗೆಯಿಂದ ದಿನನಿತ್ಯ ಪೂಜೆಯಾಗುತ್ತದೆ. ನಮ್ಮ ರಾಜ್ಯವನ್ನಾಳಿದ ಯಾವ ರಾಜರಿಗೂ ಈ ಗೌರವ ಸಿಕ್ಕಿಲ್ಲ. ಕಾಂಗ್ರೆಸ್ ಪಕ್ಷವು ಮುಸ್ಲಿಮರನ್ನು ತುಷ್ಟೀಕರಣ ಮಾಡುತ್ತಿದೆ ಎನ್ನುತ್ತಿದ್ದ ಬಿಜೆಪಿಯು ಅಧಿಕಾರಕ್ಕೆ ಬಂದ ಮೇಲೆ ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧ ಸೇಡಿನ ರಾಜಕೀಯ ಮಾಡುತ್ತಿದ್ದು, ಇದಕ್ಕೆ ಮುಖ್ಯಮಂತ್ರಿಯವರು ಮೌನ ವಹಿಸಿರುವುದು ಖೇದಕರ ಎಂದವರು ಹೇಳಿದರು.
ಪದಾಧಿಕಾರಿಗಳಾದ ಅಬ್ದುಲ್ ರಹ್ಮಾನ್, ಎಚ್.ಉಮ್ಮರ್, ಅಬ್ದುಲ್ ರವೂಫ್, ಮುಹಮ್ಮದ್ ಬಿ.ಎ. ಉಪಸ್ಥಿತರಿದ್ದರು.







